ರಸ್ತೆ ಬದಿಯಲ್ಲಿ ಬೇಕಾಬಿಟ್ಟಿ ಮೀನು ವ್ಯಾಪಾರಕ್ಕೆ ಆಕ್ಷೇಪ

YLP FISH MEETING
Published on

ಯಲ್ಲಾಪುರ: ಇಲ್ಲಿನ ಪಪಂ ಸಭಾಭವನದಲ್ಲಿ ಸಾಮಾನ್ಯ ಸಭೆ ಅಧ್ಯಕ್ಷೆ ನರ್ಮದಾ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು.

ಪಟ್ಟಣದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಇದ್ದರೂ, ವಿವಿಧೆಡೆ ರಸ್ತೆ ಬದಿಯಲ್ಲಿ ಬೇಕಾಬಿಟ್ಟಿ ಮೀನು ವ್ಯಾಪಾರ ಮಾಡುತ್ತಿರುವ ಬಗ್ಗೆ ಪಪಂ ಬಿಜೆಪಿಯ ಸದಸ್ಯರಾದ ಸೋಮೇಶ್ವರ ನಾಯ್ಕ, ಶ್ಯಾಮಲಿ ಪಾಟಣಕರ್, ಕಲ್ಪನಾ ನಾಯ್ಕ, ಶ್ರೀನಿವಾಸ ಗಾಂವ್ಕಾರ, ಆದಿತ್ಯ ಗುಡಿಗಾರ ಆಕ್ಷೇಪ ವ್ಯಕ್ತಪಡಿಸಿದರು.

ಆಸನದಿಂದ ಎದ್ದು ಹೋಗಿ ಅಧ್ಯಕ್ಷರ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯರ ಒತ್ತಡ ಹೆಚ್ಚಾದಂತೆ ಮುಖ್ಯಾಧಿಕಾರಿ ಸುನೀಲ ಗಾವಡೆ ಮಧ್ಯಪ್ರವೇಶಿಸಿ, ಮೀನು ಮಾರುಕಟ್ಟೆ ಹೊರತುಪಡಿಸಿ ಪಟ್ಟಣ ವಿವಿಧೆಡೆ ಮೀನು ಮಾರದಂತೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಿಜೆಪಿ ಸದಸ್ಯರ ಪ್ರತಿಭಟನೆಗೆ ಕಾಂಗ್ರೆಸ್ ಸದಸ್ಯರಾದ ನಾಗರಾಜ ಅಂಕೋಲೆಕರ್, ರಾಜು ನಾಯ್ಕ ಧ್ವನಿಗೂಡಿಸಿದ್ದು ವಿಶೇಷವಾಗಿತ್ತು.

ಬಸ್ ನಿಲ್ದಾಣದ ಪಕ್ಕ ಎಳನೀರು ಮಾರಾಟದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸದಸ್ಯ ನಾಗರಾಜ ಅಂಕೋಲೆಕರ್ ದೂರಿದ್ದು, ಅದನ್ನು ನಾಳೆಯೇ ಖುಲ್ಲಾಪಡಿಸಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು.

ಉಪಾಧ್ಯಕ್ಷ ಅಮಿತ ಅಂಗಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಅಲಿ, ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net