

ಮಂಡ್ಯ: ಅಮ್ಯೂಸ್ಮೆಂಟ್ ಪಾರ್ಕ್ ಹಾಗೂ ಕಾವೇರಿ ಆರತಿ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ರೈತರು ದುಡಿಕಿದ್ದಾರೆ ಎಂಬ ಹೇಳಿಕೆ ಸರಿಯಲ್ಲ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಆಕ್ಷೇಪಿಸಿದ್ದಾರೆ.
ಜೂ.6ರಂದು ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಮತ್ತು ಕಾವೇರಿ ಆರತಿ ಯೋಜನೆ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಸಂಪೂರ್ಣವಾಗಿ ವಿರೋಧಿಸಲಾಗಿದೆ. ಇದಕ್ಕೆ ಸಚಿವರು ರೈತರ ಸಭೆಯ ಅಭಿಪ್ರಾಯವನ್ನು ಸಿಎಂ ಹಾಗೂ ಡಿಸಿಎಂ ಜತೆ ಚರ್ಚಿಸಿ ನಂತರ ರೈತರೊಡನೆ ಮತ್ತೆ ಮಾತನಾಡುತ್ತೇನೆ ಎಂಬ ನಿಲುವನ್ನು ತಿಳಿಸಿದ್ದರು. ಈ ನಿಲುವಿಗೆ ರೈತರು ಬದ್ಧರಾಗಿದ್ದೇವೆ. ಆದರೆ ನಂತರ ಎರಡು ಮೂರು ದಿನ ಹಗಲು ರಾತ್ರಿ ಕಾಮಗಾರಿ ನಡೆಸಿದ್ದಾರೆ ಎಂದು ಕಿಡಿಕಾರಿದರು.
ಇದನ್ನು ನಾವು ಸಚಿವ, ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿ, ಕಾವೇರಿ ಅವರು ನಿಗಮದ ಅಧಿಕಾರಿಗಳ ಗಮನಕ್ಕೆ ತಂದರೂ ಕೆಲಸ ನಿಲ್ಲಿಸಲಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕೆಆರ್‌ಎಸ್ ಡ್ಯಾಂ ಬಳಿ ಹೋರಾಟ ಮಾಡಬೇಕಾಯಿತು. ಆದರೆ ಸಚಿವ ಎನ್.ಚಲುವರಾಯಸ್ವಾಮಿ ಅವರು ರೈತರು ದುಡಿಕಿದರು ಎಂದರೆ ಏನರ್ಥ. ಅಧಿಕಾರಿಗಳು ಸರ್ಕಾರದ ನಿಲುವನ್ನು ಉಲ್ಲಂಘನೆ ಮಾಡಿದ್ದಾರೆ. ಆದ್ದರಿಂದ ಸಚಿವರು ಜಿಲ್ಲಾಡಳಿತಕ್ಕೆ ಬುದ್ಧಿ ಹೇಳಿ ಕ್ರಮ ತೆಗೆದುಕೊಳ್ಳಬೇಕಿತ್ತು. ನಾವು ವಿವೇಚನೆಯಿಂದಲೇ ಹೋರಾಟ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಸಚಿವರ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.