

ಕಾರವಾರ: ಉಳಗಾ-ಕೆರವಡಿ ನಡುವೆ ಕಾಳಿ ನದಿಯಲ್ಲಿ ಜನರ ಓಡಾಟಕ್ಕಾಗಿ ಬಂದರು ಇಲಾಖೆಯಿಂದ ಆಯೋಜನೆಯಾಗಿದ್ದ ಬಾರ್ಜ್ ಸೇವೆಯನ್ನು ತಾತ್ಕಾಲಿಕವಾಗಿ ಬೆಳಗಾವಿ ಜಿಲ್ಲೆಗೆ ಸ್ಥಳಾಂತರಿಸಲಾಗಿದ್ದು, ಅದಕ್ಕೆ ಸ್ಥಳೀಯ ಜನ ತೀವ್ರ ಸಮಸ್ಯೆ ಅನುಭವಿಸುವಂತಾಗಿದೆ. ಸರ್ಕಾರದ ಈ ಕ್ರಮಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಸೋಮವಾರ ಆಗಮಿಸಿ, ಪ್ರತಿಭಟನೆ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಂಡರು. ಕೆರವಡಿ, ದೇವಳಮಕ್ಕಿ ಭಾಗದ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಳಗಾದ ಶಾಲೆ, ಹೈಸ್ಕೂಲ್, ಕಾಲೇಜ್‌ಗಳಿಗೆ ತೆರಳುತ್ತಾರೆ. ಅಲ್ಲದೇ ಈ ಭಾಗದ ಜನರು ಕೈಗಾ ಹಾಗೂ ಕದ್ರಾಕ್ಕೆ ಉದ್ಯೋಗಕ್ಕಾಗಿ ತೆರಳುತ್ತಾರೆ. ಅವರೆಲ್ಲರಿಗೂ ಬಾರ್ಜ್ ತುಂಬಾ ಅನುಕೂಲವಾಗಿತ್ತು. ಆದರೆ, ಗ್ರಾಮ ಪಂಚಾಯಿತಿಗೂ ಮಾಹಿತಿ ನೀಡದೇ ಬೆಳಗಾವಿ ಜಿಲ್ಲೆಗೆ ಇಲ್ಲಿನ ಬಾರ್ಜ್ನ್ನು ಸ್ಥಳಾಂತರಿಸಲಾಗಿದೆ. ದೋಣಿ ವ್ಯವಸ್ಥೆ ಮಾಡುವುದಾಗಿ ಹೇಳಲಾಗುತ್ತಿದೆ. ದೋಣಿಯಲ್ಲಿ ಮಕ್ಕಳನ್ನು ಕಳಿಸಲು ಭಯವಾಗುತ್ತದೆ ಎಂದು ಪಾಲಕರು ಆಕ್ಷೇಪಿಸಿದರು. ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮಾತನಾಡಿ, ಬೆಳಗಾವಿಯಲ್ಲಿ ಜನರು ಸಾಯುತ್ತಿದ್ದಾರೆ. ಇದರಿಂದ ಅಲ್ಲಿನ ಜಿಲ್ಲಾಽಕಾರಿ ಅವರ ಮನವಿಯಂತೆ ಬಾರ್ಜ್ನ್ನು ತಾತ್ಕಾಲಿಕವಾಗಿ ಕಳಿಸಿಕೊಡಲಾಗುತ್ತಿದೆ. ಅಲ್ಲಿಯವರೆಗೆ ಬಸ್ ವ್ಯವಸ್ಥೆಗೆ ಕೆಎಸ್‌ಆರ್‌ಟಿಸಿಗೆ ಸೂಚಿಸಲಾಗುವುದು. ಆಗದೇ ಇದ್ದಲ್ಲಿ ಖಾಸಗಿ ವಾಹನಕ್ಕೆ ವ್ಯವಸ್ಥೆ ಮಾಡಲಾಗುವುದು. ಗ್ರಾಮ ಪಂಚಾಯಿತಿಗಳು ಅದಕ್ಕೆ ಸಹಕಾರ ನೀಡಬೇಕು ಎಂದರು.
ಮೂರು ಗ್ರಾಮ ಪಂಚಾಯಿತಿಗಳು ಈ ವ್ಯಾಪ್ತಿಯಲ್ಲಿ ಬರಲಿವೆ. ಇದರಿಂದ ಎಲ್ಲರೂ ಒಟ್ಟಾಗಿ ನಿರ್ಣಯ ಕೈಗೊಳ್ಳುವುದು ಕಷ್ಟ ಜಿಲ್ಲಾಡಳಿತದಿಂದಲೇ ಸಂಪೂರ್ಣ ವೆಚ್ಚ ಭರಿಸಿ ಬಸ್ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಕೆರವಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ನಾಯ್ಕ, ಉಪಾಧ್ಯಕ್ಷೆ ದೀಪಾ ನಾಯ್ಕ, ಪಾಲಕ ದೀಪಕ್ ಹಳದೀಪುರ ಇತರರು ಇದ್ದರು.