

ನರಸಾಪುರ: ಕೋಲಾರ ತಾಲೂಕು ನರಸಾಪುರ ಗ್ರಾಮದಲ್ಲಿ ಸುಮಾರು 3.22 ಕೋಟಿ ರೂ.ಗಳ ವೆಚ್ಚದಲ್ಲಿ 2023ರ ಡಿಸೆಂಬರ್ನಲ್ಲಿ ಆರಂಭಗೊಂಡ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿ ನಡೆಸಿದ ಗುತ್ತಿಗೆದಾರ ರಸ್ತೆಗಳನ್ನು ಅಗೆದು ಸರಿಯಾಗಿ ಮುಚ್ಚದೆ ಹಾಗೆಯೇ ಬಿಟ್ಟಿದ್ದರಿಂದ ಯೋಜನೆಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿ ಜನರನ್ನು ಕಾಡುತ್ತಿದೆ.
ಕಾಮಗಾರಿ ಪ್ರಾರಂಭದಿಂದ ಈವರೆಗೂ ಈ ಯೋಜನೆಯ ಅನುಕೂಲಕ್ಕೆ ಬದಲಾಗಿ ಸಾರ್ವಜನಿಕರು ಬಿದ್ದು ಕೈಕಾಲು ಮುರಿದುಕೊಂಡು ಮೂಲೆ ಸೇರುವಂತಾಗಿದೆ. ಇದರಿಂದ ಜನರು ಆಕ್ರೋಶ ಭರಿತರಾಗಿದ್ದು, ತಕ್ಷಣವೇ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಪಂ ಸದಸ್ಯ ಕೆಇಬಿ ಚಂದ್ರು ಒತ್ತಾಯಿಸಿದ್ದಾರೆ.
ಜೆಜೆಎಂ ಕಾಮಗಾಗಿ ಮಾಡುವ ವೇಳೆ ಡಾಂಬರ್ ರಸ್ತೆ, ಸಿಮೆಂಟ್ ರಸ್ತೆಗಳನ್ನು ಅಗೆದು ಪೈಪ್ಗಳ ಹಾಕಿದ ಬಳಿಕ ಸರಿಯಾಗಿ ಮಣ್ಣು ತುಂಬದೆ ಹಳ್ಳ, ಗುಂಡಿಗಳು ನಿರ್ಮಾಣವಾಗುವಂತೆ ಮಾಡಲಾಗಿದೆ. ಇದರಿಂದ ಬೈಕ್ ಸವಾರರು ಹಾಗೂ ವೃದ್ಧರು ಬಿದ್ದು ಗಾಯಗೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಹಲವು ಬಾರಿ ಗುತ್ತಿಗೆದಾರನ ಕಾರ್ಯ ವೈಖರಿ ಕುರಿತು ಮೌಖಿಕವಾಗಿ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ವರದಿಗಾರರಿಗೆ ತಿಳಿಸಿದರು. ಕಾಮಗಾರಿ ಕೈಗೊಂಡ ಗುತ್ತಿಗೆದಾರ ಹಂತ ಹಂತವಾಗಿ ಮಾಡದೆ ಎಲ್ಲ ಬ್ಲಾಕ್ಗಳಲ್ಲಿ ಏಕಾಏಕಿ ಕೈಗೊಂಡಿದ್ದರಿಂದ ರಸ್ತೆಗಳ ಮಧ್ಯೆ ಹಳ್ಳ ಮಾಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗುತ್ತಿಗೆದಾರನ ವಿರುದ್ಧ ಕಾನೂನು ರೀತ್ಯಾ ಕ್ರಮ ವಹಿಸಿ ಕಾಮಗಾರಿಯನ್ನು ಸಮರ್ಪಕವಾಗಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.