ಮಾಲ್ ಪ್ರವೇಶಕ್ಕೆ ದುಬಾರಿ ಶುಲ್ಕ ನಿಗದಿಗೆ ಆಕ್ಷೇಪ

mall asia
Published on

ಬೆಂಗಳೂರು: ಹೊಸ ಏರ್‌ಪೋರ್ಟ್ ರಸ್ತೆಯ ಬ್ಯಾಟರಾಯನಪುರದಲ್ಲಿ ಇತ್ತೀಚಿಗೆ ಆರಂಭವಾಗಿರುವ ‘ಫೀನಿಕ್ಸ್ ಮಾಲ್ ಆಫ್ ಏಷ್ಯಾ’ ಪ್ರವೇಶಿಸಲು ಶುಲ್ಕ ನಿಗದಿ ಮಾಡಿರುವುದಕ್ಕೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ.

ದೇಶದ ಅತಿ ದೊಡ್ಡ ಶಾಪಿಂಗ್ ಮಾಲ್ ಎಂಬ ಹೆಗ್ಗಳಿಕೆಯೊಂದಿಗೆ ಎರಡು ತಿಂಗಳ ಹಿಂದೆ ಪ್ರಾರಂಭವಾಗಿರುವ ಈ ಮಾಲ್ ಜನಾಕರ್ಷಣೆಗೆ ಒಳಗಾಗಿದೆ. ಕೆಂಪೇಗೌಡ ವಿಮಾನನಿಲ್ದಾಣದ ಟರ್ಮಿನಲ್-2ರ ಒಳಾಂಗಣ ಸೊಬಗಿನಂತೆ ಈ ಮಾಲ್ ಕೂಡ ಜನರನ್ನು ಸೂಚಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ. ಜತೆಗೆ ಅಷ್ಟೇ ವೇಗದಲ್ಲಿ ಮಾಲ್ ಇರುವ ಸ್ಥಳವು ಟ್ರಾಫಿಕ್ ಜಾಮ್‌ಗೆ ಒಳಗಾಗಿ ಕುಖ್ಯಾತಿ ಪಡೆದಿದೆ. ಇದೀಗ ಪ್ರವೇಶ ಶುಲ್ಕ ವಸೂಲು ಮಾಡುತ್ತಿರುವುದರಿಂದ ಹೊಸ ವಿವಾದದಲ್ಲಿ ಸಿಲುಕಿದೆ.

ರಾಜಧಾನಿ ಬೆಂಗಳೂರಿನಲ್ಲಿ ಸುಮಾರು 20-25 ಮಾಲ್‌ಗಳು ಕಾರ್ಯಾಚರಿಸುತ್ತಿವೆ. ಇವುಗಳಲ್ಲಿ ಐದಾರು ಮಾಲ್‌ಗಳು ಬೃಹತ್ ಆಗಿದ್ದು, ಹೆಚ್ಚಿನ ಜನರು ಭೇಟಿ ನೀಡುತ್ತಿದ್ದಾರೆ. ಈ ಯಾವ ಮಾಲ್‌ಗಳಲ್ಲೂ ಸಾರ್ವಜನಿಕರಿಗೆ ಪ್ರವೇಶ ಶುಲ್ಕ ವಿಧಿಸುತ್ತಿಲ್ಲ. ಆದರೆ, ಇದೇ ಮೊದಲ ಬಾರಿಗೆ ಫೀನಿಕ್ಸ್ ಮಾಲ್ ಆಫ್​ ಏಷ್ಯಾ ಸಾರ್ವಜನಿಕರಿಂದ ತಲಾ 200 ರೂ. ಪ್ರವೇಶ ಶುಲ್ಕ ಪಡೆಯುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಕಳೆದೊಂದು ವಾರದಿಂದ ಶುಲ್ಕ ವಸೂಲು ವಿಚಾರವಾಗಿ ನಾಗರಿಕರು ಹಾಗೂ ಮಾಲ್ ಸಿಬ್ಬಂದಿ ಮಧ್ಯೆ ಜಟಾಪಟಿಗೆ ಕಾರಣವಾಗಿದೆ.

ಇತರ ಶಾಪಿಂಗ್ ಕಾಂಪ್ಲೆಕ್ಸ್ ರೀತಿ ಫೀನಿಕ್ಸ್ ಮಾಲ್ ಆಫ್​ ಏಷ್ಯಾ ಕೂಡ ಕಾರ್ಯಾಚರಿಸುತ್ತಿದೆ. ಇದು ಸಾರ್ವಜನಿಕರ ಭೇಟಿಗೆ ಅವಕಾಶ ಇರುವುದರಿಂದ ದುಬಾರಿ ಪ್ರವೇಶ ಶುಲ್ಕ ತೆರಬೇಕಿಲ್ಲ. ಶುಲ್ಕ ಸಂಗ್ರ ಜನವಿರೋಧಿ ನೀತಿಯಾಗಿದೆ. ಅದರಲ್ಲೂ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿರುವ ನೆಪ ಹೇಳಿ ಒಬ್ಬರಿಗೆ 200 ರೂ. ಶುಲ್ಕ ವಿಧಿಸುವುದು ಸಾಧುವಲ್ಲ. ದೂರದ ಪ್ರದೇಶಗಳಿಂದ ಬಸ್, ಆಟೋ, ಟ್ಯಾಕ್ಸಿ ಮೂಲಕ ನೂರಾರು ರೂ. ಖರ್ಚು ಮಾಡಿಕೊಂಡು ಬರುವ ನಾವು ಮಾಲ್‌ಗೆ ಪ್ರತ್ಯೇಕವಾಗಿ 200 ನೀಡುವುದು ಎಷ್ಟರಮಟ್ಟಿಗೆ ಸರಿ ಎಂದು ಹಲವು ನಾಗರಿಕರು ‘ವಿಜಯವಾಣಿ’ ಬಳಿ ಅಳಲು ತೋಡಿಕೊಂಡಿದ್ದಾರೆ.

ನಗರದ ಯಾವ ಮಾಲ್‌ನಲ್ಲೂ ಇಲ್ಲದ ಪ್ರವೇಶ ಶುಲ್ಕ ವ್ಯವಸ್ಥೆಯನ್ನು ಫೀನಿಕ್ಸ್ ಮಾಲ್ ಆಫ್​ ಏಷ್ಯಾ ಜನರ ಮೇಲೆ ಬಲವಂತಾಗಿ ಹೇರಿದೆ. ಹೀಗಾಗಿ ಮಾಲ್‌ನ ವ್ಯವಸ್ಥಾಪಕ ವರ್ಗವು ಶುಲ್ಕ ವಸೂಲಿಯನ್ನು ರದ್ದುಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪುನೀತ್ ವಿರುದ್ಧದ ಎಫ್ಐಆರ್‌ಗೆ ಆಕ್ಷೇಪ?:

ಇತ್ತೀಚಿಗೆ ಹಿಂದು ಸಂಘಟನೆಯೊಂದರ ಮುಖಂಡ ಪುನೀತ್ ಹಿರೇಹಳ್ಳಿ ಅವರು ಮಾಲ್ ಪ್ರವೇಶಕ್ಕೆ ದುಬಾರಿ ಶುಲ್ಕ ವಿಧಿಸಿದ ಕಾರಣಕ್ಕೆ ಪ್ರತಿಭಟನೆ ನಡೆಸಿದರೆಂದು ಅವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ವಿಚಾರವಾಗಿ ಜಾಲತಾಣದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ. ಸಾರ್ವಜನಿಕರಿಗಾಗುವ ತೊಂದರೆಯನ್ನು ಪ್ರಶ್ನಿಸಿದರೆ ಎಫ್ಐಆರ್ ಹಾಕುವುದು ಏಕೆ ಎಂಬ ಪ್ರಶ್ನೆಗಳ ಸುರಿಮಳೆಯಾಗಿದೆ. ಮಾಲ್‌ನಲ್ಲಿ ಖರೀದಿ ಮಾಡಲಷ್ಟೇ ಹೋಗುವುದಾದಲ್ಲಿ ಶುಲ್ಕ ನೀಡಬೇಕೆಂಬ ನಿಯಮ ಯಾವ ಕಾನೂನು ಪುಸ್ತಕದಲ್ಲಿದೆ ಎಂಬುದಾಗಿ ನಾಗರಿಕರು ಸಿಟ್ಟು ವ್ಯಕ್ತಪಡಿಸಿದ್ದಾರೆ.

ನಿತ್ಯ ಟ್ರಾಫಿಕ್ ಜಾಮ್:

ಮಾಲ್‌ಅನ್ನು ಏರ್‌ಪೋರ್ಟ್ ರಸ್ತೆಗೆ ಹೊಂದಿಕೊಂಡಂತೆ ನಿರ್ಮಿಸಲಾಗಿದೆ. ಇದು ಬರೋಬರಿ 12 ಲಕ್ಷ ಚದರ ಅಡಿ ಪ್ರದೇಶದಲ್ಲಿ ಹರಡಿಕೊಂಡಿದ್ದು, 250ಕ್ಕೂ ಹೆಚ್ಚು ಮಳಿಗೆಗಳಿವೆ. ಸದ್ಯದಲ್ಲೇ 14 ಸ್ಕ್ರೀನ್‌ಗಳ ಐನಾಕ್ಸ್ ಥಿಯೇಟರ್ ಕೂಡ ಲೋಕಾರ್ಪಣೆಗೊಳ್ಳಲಿದೆ. ಹೀಗಾಗಿ ದಿನಕ್ಕೆ ಒಂದು ಲಕ್ಷ ಮಂದಿ ಭೇಟಿ ನೀಡುವ ಸಾಮರ್ಥ್ಯ ನಿಭಾಯಿಸಬಹುದಾಗಿದೆ. ಮಾಲ್ ಒಳಗೆ 3,400 ವಾಹನಗಳಿಗೆ ನಿಲುಗಡೆ ವ್ಯವಸ್ಥೆ ಇರುವುದರಿಂದ ಪಾರ್ಕಿಂಗ್ ಸಮಸ್ಯೆ ಇರದು ಎಂದು ಮಾಲ್ ಮುಖ್ಯಸ್ಥರು ಹೇಳಿದ್ದರು. ಆದರೆ, ಇತ್ತೀಚಿಗೆ ದಿಢೀರ್ ಆಗಿ ಪಾರ್ಕಿಂಗ್ ಶುಲ್ಕವಾಗಿ ಕಾರಿಗೆ 150 ರೂ. ಹಾಗೂ ಬೈಕ್‌ಗೆ 90 ರೂ. ವಿಧಿಸಲಾಗುತ್ತಿದೆ. ಇದರಿಂದಾಗಿ ಬಹಳಷ್ಟು ಜನರು ರಸ್ತೆಯಲ್ಲೇ ವಾಹನ ನಿಲುಗಡೆ ಮಾಡುತ್ತಿದ್ದಾರೆ. ಜತೆಗೆ ಮಾಲ್ ಪ್ರವೇಶ/ನಿರ್ಗಮನ ಒಂದೇ ಕಡೆಯಿರುವುದರಿಂದ ನಿತ್ಯವೂ ಟ್ರಾಫಿಕ್ ಜಾಮ್‌ಗೆ ಕಾರಣವಾಗಿದೆ.

ವಾರಾಂತ್ಯವಂತೂ ನಿಯಂತ್ರಿಸಲಾರದಷ್ಟು ಸಂಚಾರ ದಟ್ಟಣೆ ಉಂಟಾಗುತ್ತಿದೆ. ಮಾಲ್ ಸಮೀಪವಿರುವ ನಾಲ್ಕೈದು ಆಸ್ಪತ್ರೆಗಳಿಗೆ ರೋಗಿಗಳು ತುರ್ತಾಗಿ ತೆರಳಲು ಸಾಧ್ಯವಾಗುತ್ತಿಲ್ಲ. ಹಲವು ಬಾರಿ ಟ್ರಾಫಿಕ್ ಮಧ್ಯೆ ಆಂಬುಲೆನ್ಸ್ ವಾಹನ ಸಿಲುಕಿ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರ ಓಡಾಟ ಹಾಗೂ ಸಂಚಾರಕ್ಕೂ ಭಾರೀ ಸಂಚಕಾರ ಉಂಟಾಗಿದ್ದು, ಪೊಲೀಸರು ನಮ್ಮ ನೆರವಿಗೆ ಬಂದಿಲ್ಲ ಎನ್ನುತ್ತಾರೆ ಬ್ಯಾಟರಾಯನಪುರ ಗ್ರಾಮಸ್ಥರು.

ಮಾಲ್ ಆರಂಭವಾದಾಗಿನಿಂದಲೂ ನಿತ್ಯ ಏರ್‌ಪೋರ್ಟ್ ರಸ್ತೆಯಲ್ಲಿ ಸಂಚಾರ ವ್ಯತ್ಯಯವಾಗುತ್ತಿದೆ. ಮಾಲ್ ವ್ಯವಸ್ಥಾಪಕರು ಹಾಗೂ ಸಂಚಾರ ಪೊಲೀಸರ ಮಧ್ಯೆ ಸಮನ್ವಯ ಇಲ್ಲದ ಕಾರಣ ಟ್ರಾಫಿಕ್ ನಿಯಂತ್ರಣ ಹಳಿತಪ್ಪಿದೆ. ಇದೀಗ ಪ್ರವೇಶ ದರ ವಸೂಲಿ ಮಾಡುತ್ತಿರುವುದರಿಂದ ಮತ್ತಷ್ಟು ಸಮಸ್ಯೆ ಉಂಟಾಗಿದೆ. ಜನರು ಕೂಡ ಸರ್ವಿಸ್ ರಸ್ತೆಯಲ್ಲೇ ವಾಹನ ನಿಲ್ಲಿಸುತ್ತಿರುವುದು ಸಮಸ್ಯೆಯನ್ನು ಹಿಗ್ಗಿಸಿದೆ.

- ಸಿ.ವೆಂಕಟೇಶ್, ಬ್ಯಾಟರಾಯನಪುರ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net