

ಬೆಂಗಳೂರು: ರಾಜಧಾನಿ ಬೆಂಗಳೂರು ಅಭಿವೃದ್ಧಿಯನ್ನು ಕೇಂದ್ರವಾಗಿಸಿಕೊಂಡು ಹೊಸ ಆಡಳಿತ ವ್ಯವಸ್ಥೆ ರೂಪಿಸಲು ನೇಮಿಸಿದ್ದ ಮಾಜಿ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ನೇತೃತ್ವದ ಬಿಬಿಎಂಪಿ ಆಡಳಿತ ಸುಧಾರಣಾ ಸಮಿತಿಯು, ‘ಗ್ರೇಟರ್ ಬೆಂಗಳೂರು ಆಡಳಿತ ಕರಡು ವಿಧೇಯಕ’ವನ್ನು ಸಾರ್ವಜನಿಕರ ಸಲಹೆ-ಸೂಚನೆ ಪಡೆಯದೆ ಸರ್ಕಾರಕ್ಕೆ ಸಲ್ಲಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಬಿಬಿಎಂಪಿಗೆ ಮೇಜರ್ ಸರ್ಜರಿ ಆಗಬೇಕಿತ್ತು. ಆದರೆ, ಭವಿಷ್ಯದಲ್ಲಿ ಪಾಲಿಕೆ ತನ್ನ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ನಾಗರಿಕರಿಂದ ಅಭಿಪ್ರಾಯ ಸಂಗ್ರಹಿಸಬೇಕಿತ್ತು. ಇದನ್ನಾಧರಿಸಿ ಸಮಿತಿಯು ತಮ್ಮ ವ್ಯಾಪ್ತಿಯಲ್ಲಿ ಪ್ರಧಾನವಾಗಿ ಚರ್ಚಿಸಿ ಸಮಗ್ರ ರೂಪದಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಂತಹ ಶಿಾರಸುಅನ್ನು ನೀಡಬೇಕಿತ್ತು. ಆದರೆ, ಆಡಳಿತ ತಜ್ಞರು ಮಾತ್ರ ತಮ್ಮ ಮೂಗಿನ ನೇರಕ್ಕೆ ನೀಡಿರುವ ಕರಡಿನಲ್ಲಿ ಜನಹಿತ ಅಡಗಿಲ್ಲ ಎಂಬ ಅಪಸ್ವರ ಎದ್ದಿದೆ.
ಪ್ರಸ್ತುತ ಪಾಲಿಕೆಯಲ್ಲಿ ಚುನಾಯಿತ ಸರ್ಕಾರ ಇಲ್ಲದ ಕಾರಣ ಆಡಳಿತವನ್ನು ಅಧಿಕಾರಿಗಳೇ ನಿರ್ವಹಿಸುತ್ತಿದ್ದಾರೆ. ಸರ್ಕಾರದ ಮಾರ್ಗದರ್ಶನ ಪಡೆಯುತ್ತಿದ್ದರೂ, ಕೆಲ ಸಂಘ-ಸಂಸ್ಥೆಗಳು ನಾಗರಿಕರ ಅಹವಾಲನ್ನು ಮುಖ್ಯ ಆಯುಕ್ತರಿಗೆ ನೀಡಿ ಅವುಗಳನ್ನು ಜಾರಿಗೊಳಿಸಲು ಒತ್ತಡ ತರುವ ಕೆಲಸದಲ್ಲಿ ನಿರತವಾಗಿವೆ. ಇದೇ ರೀತಿ ಸುಧಾರಣಾ ಸಮಿತಿ ಕೂಡ ನಾಗರಿಕರು, ಸಂಘ-ಸಂಸ್ಥೆಗಳ ಸಲಹೆ ಪಡೆದು ಮುಂದುವರಿಯಬೇಕಿತ್ತು. ಈಗ ಸಲ್ಲಿಕೆಯಾಗಿರುವ ಕರಡು ಅಧಿಕಾರಸ್ಥರ ಸಲಹೆಯನ್ನು ಮಾತ್ರ ಪರಿಗಣಿಸಲಾಗಿದೆಯೇ ಹೊರತು ಆಡಳಿತದಲ್ಲಿ ಜನರ ಪಾಲ್ಗೊಳ್ಳುವ ವಿಚಾರಕ್ಕೆ ಸಂಬಂಧಿಸಿ ಕರಡಿನಲ್ಲಿ ಅಡಕಗೊಳಿಸಿಲ್ಲ. ಹಾಗಾಗಿ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಕರಡನ್ನು ಸಾರ್ವಜನಿಕ ಆಕ್ಷೇಪಣೆಗೆ ಅವಕಾಶ ಮಾಡಿಕೊಟ್ಟು ನಂತರ ಬಂದಂತಹ ಸಲಹೆಗಳನ್ನಾಧರಿಸಿ ಪರಿಷ್ಕೃತ ರೂಪದಲ್ಲಿ ಕರಡನ್ನು ವಿಧಾನಮಂಡಲದಲ್ಲಿ ಮಂಡಿಸುವ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ನಾಗರಿಕ ಸಂಘಟನೆಗಳು ಆಗ್ರಹಿಸಿವೆ.
ಚುನಾವಣೆ ಮುಂದೂಡುವ ತಂತ್ರವೇ?:
ಸದ್ಯ ಬಿಬಿಎಂಪಿಯಲ್ಲಿ ಚುನಾಯಿತ ಸರ್ಕಾರ ಇಲ್ಲದೆ ನಾಲ್ಕು ವರ್ಷ ಕಳೆಯುತ್ತಾ ಬಂದಿದೆ. ಆದರೂ, ಚುನಾವಣೆ ನಡೆಸುವ ಮನಸ್ಸು ಸರ್ಕಾರಕ್ಕೆ ಇದ್ದಂತಿಲ್ಲ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ರಾಜಧಾನಿಯಲ್ಲಿ ಹಿನ್ನಡೆ ಅನುಭವಿಸಿರುವ ಕಾರಣ ಪಾಲಿಕೆ ಎಲೆಕ್ಷನ್ ಬಗ್ಗೆ ಗಂಭೀರತೆ ಹೊಂದಿದಂತಿಲ್ಲ. ಆ ಪಕ್ಷದ ಹೆಚ್ಚಿನ ಶಾಸಕರು ಹಾಗೂ ಮುಖಂಡರು ಇನ್ನೊಂದಿಷ್ಟು ಕಾಲ ಚುನಾವಣೆ ಮುಂದಕ್ಕೆ ಹಾಕುವಿಗೆ ಪರೋಕ್ಷ ಬೆಂಬಲ ನೀಡಿದಂತಿದೆ. ಈ ಸ್ಥಿತಿಯಲ್ಲಿ ಚುನಾವಣೆಯನ್ನು ಮುಂದೂಡಲು ಸ್ಪಷ್ಟ ಕಾರಣ ಬೇಕಿದ್ದು, ಅದು ಗ್ರೇಟರ್ ಬೆಂಗಳೂರು ರಚಿಸುವ ರೂಪದಲ್ಲಿ ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ಕಿಡಿಕಾರಿವೆ.
ಮುಖ್ಯವಾಗಿ 2002ರಲ್ಲಿ ಕೈಗೊಂಡಿರುವ ಸಂವಿಧಾನದ 84ನೇ ತಿದ್ದುಪಡಿ ಅನ್ವಯ ವಿಧಾನಸಭೆ ಕ್ಷೇತ್ರ ಪುನರ್ವಿಂಗಡಣೆ ಕಾರ್ಯ 2026ರಲ್ಲಿ ನಡೆಯಬೇಕಿದೆ. ಇದನ್ನು 2021ರ ಜನಗಣತಿ ಆಧರಿಸಿಯೇ ಕೈಗೊಳ್ಳಬೇಕಿದ್ದರೂ, ಕೋವಿಡ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಜನಗಣತಿ ಪ್ರಕ್ರಿಯೆ ಪುನಾರಂಭಗೊಂಡಿಲ್ಲ. ಬಿಬಿಎಂಪಿ ಚುನಾವಣೆಗೂ 2021ರ ಜನಗಣತಿ ಅಂಕಿ-ಅಂಶ ಸಿಗುವುದು ಅನುಮಾನ. ಈ ಎರಡೂ ಕಾರಣದಿಂದ ಪಾಲಿಕೆ ಚುನಾವಣೆಯನ್ನು ಇನ್ನೊಂದಿಷ್ಟು ಕಾಲ ಮುಂದೂಡುವ ದೂರಾಲೋಚನೆ ಆಡಳಿತ ಕಾಂಗ್ರೆಸ್ ಮುಖಂಡರಲ್ಲಿದೆ.
ಬಿಲ್ ಮಂಡನೆಗೆ ಉತ್ಸುಕತೆ:
ಬಿಬಿಎಂಪಿಗೆ ಹೊಸ ರೂಪ ನೀಡುವ ‘ಗ್ರೇಟರ್ ಬೆಂಗಳೂರು ಆಡಳಿತ ಕರಡು ವಿಧೇಯಕ’ ಗುರುವಾರ (ಜು.11) ಸಚಿವ ಸಂಪುಟದಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ. ಇದಕ್ಕೆ ಒಪ್ಪಿಗೆ ದೊರೆತಲ್ಲಿ ಜು.15ರಿಂದ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ವಿಧೇಯಕ ಮಂಡಿಸಿ ಚರ್ಚೆಗೆ ಅವಕಾಶ ಕಲ್ಪಿಸುವ ಇಂಗಿತ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎನ್ನಲಾಗಿದೆ. ಈಗಾಗಲೇ ರಾಜಧಾನಿ ಪ್ರತಿನಿಧಿಸುವ ಕಾಂಗ್ರೆಸ್ ಶಾಸಕರ ಅಭಿಪ್ರಾಯ ಪಡೆದೇ ಗ್ರೇಟರ್ ಬೆಂಗಳೂರು ರಚಿಸುವ ಕಸರತ್ತು ಆರಂಭಿಸಲಾಗಿದೆ. ಹಾಲಿ ಪಾಲಿಕೆಯನ್ನು ವಿಭಜನೆ ಮಾಡದೆ ಹೊಸ ಆಡಳಿತ ವ್ಯವಸ್ಥೆ ತರಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸ್ಥಾಪನೆಗೂ ಸರ್ಕಾರ ಉತ್ಸುಕತೆ ಹೊಂದಿದೆ. ಇತ್ತೀಚಿನ ವಿಭಜನೆ ಮಾಡುವ ಚರ್ಚೆ ವೇಳೆ ಪ್ರತಿಪಕ್ಷಗಳು ಆಡಳಿತಕ್ಕೆ ಸರ್ಜರಿ ಮಾಡಲಿ, ವಿಭಜನೆ ಬೇಡ ಎಂಬ ಸಲಹೆ ನೀಡಿತ್ತು. ಹೀಗಾಗಿ ಹೊಸ ವ್ಯವಸ್ಥೆಯನ್ನು ಆಡಳಿತ ಸುಧಾರಣೆಗೆ ಮಾತ್ರ ಸೀಮಿತ ಮಾಡಲಾಗುತ್ತದೆ ಎಂಬುದನ್ನು ಅಧಿವೇಶನದಲ್ಲಿ ಎಲ್ಲ ಶಾಸಕರಿಗೂ ಮನವರಿಕೆ ಮಾಡಿಕೊಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.