

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಹುದ್ದೆಗೆ ಎಸ್.ಮಹೇಶ್ವರ ರಾವ್ ಅವರನ್ನು ಹಂಗಾಮಿ ಆಗಿ ನೇಮಕ ಮಾಡಿರುವ ಸರ್ಕಾರದ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಹಾಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಪಾಲಿಕೆಯ ಆಡಳಿತಾಧಿಕಾರಿ ಮತ್ತು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ವರ್ಗಾಯಿಸಿದ್ದು, ತೆರವಾದ ಸ್ಥಾನಕ್ಕೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಅವರಿಗೆ ಹೆಚ್ಚುವರಿಯಾಗಿ ಹಂಗಾಮಿಯಾಗಿ ಕಾರ್ಯಭಾರ ವಹಿಸಲಾಗಿದೆ. ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪಾಲಿಕೆಯ ಮುಖ್ಯಸ್ಥರ ಹುದ್ದೆಗೆ ಸರ್ಕಾರ ಹಂಗಾಮಿ ಅಧಿಕಾರಿಯನ್ನು ನೇಮಿಸಿದೆ. ಇದು ಆಡಳಿತ ದೃಷ್ಟಿಯಿಂದ ಸರಿಯಾದ ನಿರ್ಧಾರವಲ್ಲ ಎಂದು ಮಾಜಿ ಕಾರ್ಪೊರೇಟರ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಬಿಬಿಎಂಪಿಗೆ ಚುನಾವಣೆ ನಡೆಯದೆ ನಾಲ್ಕೂವರೆ ವರ್ಷ ಕಳೆದಿದೆ. ಜತೆಗೆ ಗ್ರೇಟರ್ ಬೆಂಗಳೂರು ಕಾಯ್ದೆಗೆ ಅನುಮೋದನೆ ದೊರೆತಿದ್ದು, ರಾಜ್ಯಪತ್ರ ಹೊರಡಿಸಲಾಗಿದೆ. ಇದರ ಬಳಿಕ ಮುಂದಿನ ಪ್ರಕ್ರಿಯೆಗೆ ವೇಗ ನೀಡಬೇಕಿದೆ. ಜತೆಗೆ ಆಡಳಿತಾಧಿಕಾರಿಗಳ ಅವಧಿಯಲ್ಲಿ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲವೆಂದು ಆಡಳಿತ ಹಾಗೂ ಪ್ರತಿಪಕ್ಷ ಶಾಸಕರು ಬಹಿರಂಗವಾಗಿಯೇ ದೂರಿದ್ದಾರೆ. ಸರ್ಕಾರ ಅನುದಾನ ಮಂಜೂರು ಮಾಡಿದರೂ, ಅದು ಸಕಾಲಕ್ಕೆ ಬಿಡುಗಡೆ ಆಗದೆ ಹೆಚ್ಚಿನ ಕಾಮಗಾರಿಗಳು ಕುಂಟುತ್ತಾ ಸಾಗಿವೆ. ಇದರಿಂದ ಅಭಿವೃದ್ಧಿ ಹಿಂದೆ ಬಿದ್ದಿದೆ ಎಂದು ನಾಗರಿಕರು ಪದೇ ಪದೆ ಬಿಬಿಎಂಪಿ ಹಾಗೂ ಸರ್ಕಾರಕ್ಕೆ ತಿಳಿಸುತ್ತಿದ್ದರೂ, ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ. ಈಗ ಮುಖ್ಯ ಆಯುಕ್ತರ ಹುದ್ದೆಗೆ ಹಂಗಾಮಿ ಆಗಿ ನೇಮಿಸಿದರೆ ಮತ್ತೆ ಅಭಿವೃದ್ಧಿಗೆ ಅಡ್ಡಿ ಆಗುವುದಿಲ್ಲವೆ ಎಂಬ ಪ್ರಶ್ನೆ ಉದ್ಭವಿಸಿದೆ.
ನಿರ್ಧಾರ ಕೈಗೊಳ್ಳಲು ತಾಂತ್ರಿಕ ಅಡ್ಡಿ?:
ಪಾಲಿಕೆಯಲ್ಲಿ ಮುಖ್ಯ ಆಯುಕ್ತರು ಸೇರಿ ಸದ್ಯ 24 ಐಎಎಸ್ ಅಧಿಕಾರಿಗಳು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ ಪ್ರಮುಖ ವಿಭಾಗಗಳಿಗೆ ಹಾಗೂ ಎಂಟೂ ವಲಯಗಳ ಆಯುಕ್ತ ಹಾಗೂ ಜಂಟಿ ಆಯುಕ್ತರ ಸ್ಥಾನದಲ್ಲಿ ಐಎಎಸ್‌ನವರನ್ನು ನಿಯೋಜಿಸಲಾಗಿದೆ. ಇಂತಹವರಲ್ಲಿ ಕೆಲವರು ಹಿರಿಯ ಐಎಎಸ್‌ನವರು ಇದ್ದು, ಹಾಲಿ ಮಹೇಶ್ಚರ ರಾವ್ ಅವರು ಇತರ ಅಧಿಕಾರಿಗಳ ಸಮಾನ ದರ್ಜೆ ಹೊಂದಿದ್ದಾರೆ. ಆದರೂ, ಸೋಮವಾರ ಹೊರಡಿಸಲಾದ ವರ್ಗಾವಣೆ ಆದೇಶದಲ್ಲಿ ಹುದ್ದೆಯ ಜವಾಬ್ದಾರಿ ನಿಭಾಯಿಸಲು ಅವಕಾಶ ಮಾಡಿಕೊಡಲಾಗಿದೆ. ಆದರೆ, ಇತರ ಐಎಎಸ್ ಅಧಿಕಾರಿಗಳು ತಮ್ಮ ವಯಸ್ಸಿನವರೇ ಆದ ಮಹೇಶ್ವರ ರಾವ್ ಅವರ ಆಣತಿಯಂತೆ ಕೆಲಸ ಮಾಡಲು ಹಿಂದೇಟು ಹಾಕುವ ಸಾಧ್ಯತೆ ಇದೆ. ಈ ಹಿಂದೆಯೂ ಇಂಥದ್ದೇ ಸಂದಿಗ್ಧತೆ ಸೃಷ್ಟಿಯಾಗಿದ್ದಾಗ ಹಿರಿಯ ಐಎಎಸ್ ಅಧಿಕಾರಿಯನ್ನೇ ಪೂರ್ಣ ಪ್ರಮಾಣದಲ್ಲಿ ನೇಮಿಸಲಾಗಿತ್ತು. ಇದೇ ಕೆಲಸವನ್ನು ಈಗಲೂ ಮಾಡಲು ಸರ್ಕಾರಕ್ಕೆ ಏನು ಅಡ್ಡಿ ಎಂಬ ಮಾತುಗಳು ಮಾಜಿ ಪುರಪಿತೃಗಳಿಂದ ಕೇಳಿಬಂದಿದೆ.
ಪಾರ್ಟ್‌ಟೈಮ್ ನೇಮಕ ವಿರೋಧಿಸಿ ಟ್ವೀಟ್:
ಪಾಲಿಕೆಯ ಮುಖ್ಯ ಆಯುಕ್ತರ ಹುದ್ದೆಗೆ ಹಂಗಾಮಿ ಅಧಿಕಾರಿ ನೇಮಕ ಮಾಡಿರುವುದನ್ನು ವಿರೋಧಿಸಿ ಬಿಜೆಪಿ ಸಂಸದ ಪಿ.ಸಿ.ಮೋಹನ್ ಅವರು, ಬಿಬಿಎಂಪಿ ಕಮಿಷನರ್ ಪಾರ್ಟ್‌ಟೈಮ್ ಆಗಿದ್ದಾರೆ ಎಂದು ಎಕ್ಸ್ ಜಾಲತಾಣದಲ್ಲಿ ಗೇಲಿ ಮಾಡಿದ್ದಾರೆ. ಇದಕ್ಕೆ ಹಲವು ಪ್ರತಿಕ್ರಿಯಿಸಿದ್ದು, ಫುಲ್ ಟೈಮ್ ಮುಖ್ಯ ಮುಖ್ಯ ಆಯುಕ್ತರನ್ನು ನೇಮಿಸಿ ಬಿಬಿಎಂಪಿಗೆ ಬಲ ತುಂಬಬೇಕು ಎಂದು ಆಗ್ರಹಿಸಿದ್ದಾರೆ.
ಸಂಸದ ಮೋಹನ್ ಟ್ವೀಟ್:
ಬಿಬಿಎಂಪಿ ಕಮಿಷನರ್ ಪಾರ್ಟ್‌ಟೈಮ್, ಬಿಎಂಆರ್‌ಸಿಎಲ್ ಎಂಡಿ ಪಾರ್ಟ್‌ಟೈಮ್, ಸ್ಟೇಟ್ ಗೌರ್ನಮೆಂಟ್ ಪಾರ್ಟ್‌ಟೈಮ್, ಕರಪ್ಶನ್ ಫುಲ್‌ಟೈಮ್- ಹೈಸ್ಪೀಡ್-ನಾನ್‌ಸ್ಟಾಪ್. ಜಾಲಿ ಜಾಲಿ, ಎಲ್ಲ ಜಾಲಿ.
- ಪಿ.ಸಿ.ಮೋಹನ್, ಬಿಜೆಪಿ ಸಂಸದ
ಇಂದು ಅಧಿಕಾರ ಸ್ವೀಕಾರ:
ಬಿಬಿಎಂಪಿ ಆಡಳಿತಾಧಿಕಾರಿ, ಮುಖ್ಯ ಆಯುಕ್ತರ ಹುದ್ದೆಗೆ ಹೊಸ ಅಧಿಕಾರಿ ನೇಮಕದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಅಧಿಕಾರ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರಾಭಿವೃದ್ಧಿ ಇಲಾಖೆಯ ಎಸಿಎಸ್ ಹುದ್ದೆಗೆ ನೇಮಕವಾಗಿರುವ ತುಷಾರ್ ಗಿರಿನಾಥ್ ಅವರು ಆ ಹುದ್ದೆಯನ್ನು ಪಾಲಿಕೆ ಕಚೇರಿಯಲ್ಲೇ ಅಧಿಕಾರ ಸ್ವೀಕರಿಸುವವರಿದ್ದಾರೆ. ಸೇವೆಯಿಂದ ನಿವೃತ್ತರಾಗಲಿರುವ ಎಸ್.ಆರ್.ಉಮಾಶಂಕರ್ ಅವರು ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.