ಸ್ವತ್ತು ವಿಭಜನೆ ಅಧಿಕಾರ ವರ್ಗಾವಣೆಗೆ ನಾಗರಿಕರ ಆಕ್ಷೇಪ

bbmp office
Published on

ಬೆಂಗಳೂರು: ಖಾತಾ ವಿಭಜನೆಗೆ ಸಂಬಂಧಿಸಿದಂತೆ ಸೌಲಭ್ಯ ನೀಡುವ ಅಧಿಕಾರವನ್ನು ಬಿಬಿಎಂಪಿಯಿಂದ ಬಿಡಿಎಗೆ ವರ್ಗಾವಣೆಯಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಖಾತಾ ನೊಂದಾವಣೆ ಮತ್ತು ವಿಭಜನೆ ಮಾಡುವುದಕ್ಕೆ ಸಂಬಂಧಿಸಿ ಪರಿಷ್ಕೃತ ಸುತ್ತೋಲೆ ಹೊರಡಿಸಿರುವ ಪಾಲಿಕೆಯ ನಡೆ ಸರಿಯಲ್ಲ ಎಂದು ಹಲವು ನಾಗರಿಕರು ಹಾಗೂ ಮಾಜಿ ಕಾರ್ಪೊರೇಟರ್‌ಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಈವರೆಗೂ ಸುಗಮವಾಗಿ ಸಾಗುತ್ತಿದ್ದ ವ್ಯವಸ್ಥೆಯನ್ನು ಇನ್ನಷ್ಟು ಮೇಲ್ದರ್ಜೆಗೇರಿಸುವ ಬದಲು ಇದ್ದಕ್ಕಿದ್ದ ಹಾಗೆ ಬೇರೊಂದು ಸಂಸ್ಥೆಗೆ ವಹಿಸಿರುವುದು ವೃಥಾ ಅಲೆದಾಟ ಹಾಗೂ ಭ್ರಷ್ಟಾಚಾರಕ್ಕೆ ಆಸ್ಪದ ನೀಡುತ್ತದೆ ಎಂಬ ಮಾತು ಕೇಳಿಬಂದಿದೆ. ಹೇಳಿ ಕೇಳಿ ಬಿಡಿಎನಲ್ಲಿ ಸರ್ಕಾರಿ ಕೆಲಸ ನಿಧಾನವಾಗಿ ಸಾಗುತ್ತದೆ. ಸಣ್ಣ ಕೆಲಸಕ್ಕೂ ದೀರ್ಘ ಕಾಲ ತೆಗೆದುಕೊಳ್ಳುವ ಪ್ರಾಧಿಕಾರದ ಕಾರ್ಯಶೈಲಿಗೆ ಸಾರ್ವಜನಿಕರು ಹಿಂದಿನಿಂದಲೂ ಆಕ್ಷೇಪಿಸುತ್ತಾ ಬಂದಿದ್ದಾರೆ. ಈಗ ಪ್ರಮುಖ ದಾಖಲೆ ಪಡೆಯಲು ಬಿಡಿಎ ಕಚೇರಿಗೆ ಅಲೆಯಬೇಕಾಗುತ್ತದೆಯೆ ವಿನಾ ತ್ವರಿತ ಸೇವೆ ಸಿಗುವುದಿಲ್ಲ ಎಂದು ಬಹಳಷ್ಟು ಮಂದಿ ಸಿಟ್ಟು ಹೊರಹಾಕಿದ್ದಾರೆ.

ನಾಗರಿಕರ ಈ ಮಾತಿಗೆ ಹಲವು ಮಾಜಿ ಕಾರ್ಪೊರೇಟರ್‌ಗಳು ದನಿ ಎತ್ತಿದ್ದಾರೆ. ಪಾಲಿಕೆಯ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಅವರು ಖಾತಾ ವಿಭಜನೆ ಅಧಿಕಾರವನ್ನು ಬಿಡಿಎಗೆ ವಹಿಸದೆ ಹಿಂದಿದ್ದಂತೆ ಪಾಲಿಕೆಯೇ ಮುಂದುವರಿಸಿಕೊಂಡು ಹೋಗಬೇಕು ಎಂದು ಕೋರಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಗುರುವಾರ ಪತ್ರ ಬರೆದು ಒತ್ತಾಯಿಸಿದ್ದಾರೆ.

ಪ್ರಸ್ತುತ ಪಾಲಿಕೆಯ ಪ್ರತಿಯೊಂದು ವಾರ್ಡ್‌ಗಳಲ್ಲಿ ಕಂದಾಯ ಇಲಾಖೆಯ ಕಚೇರಿ ಇವೆ. ಉಪ ವಿಭಾಗಗಳಲ್ಲಿ ಎಆರ್‌ಒ ಅಧಿಕಾರಿಗಳು ಇರುವುದರಿಂದ ಖಾತಾ ವಿಭಜನೆ, ಖಾತಾ ಒಂದುಗೂಡಿಸುವಿಕೆ ಮಾಡಿ ಅರ್ಜಿದಾರರಿಗೆ ವಿತರಣೆ ಸುಲಭವಿದೆ. ಈ ಕಾರ್ಯ ಸುಗಮವಾಗಿ ಸಾಗುತ್ತಿದೆ. ಆದರೆ, ಇಡೀ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಡಿಎ ಕಂದಾಯ ಇಲಾಖೆಗೆ ಸಂಬಂಧಿಸಿದ 4-5 ಕಚೇರಿಗಳು ಮಾತ್ರವೇ ಇವೆ. ಪ್ರತಿಯೊಂದು ವಾರ್ಡ್‌ನ ನಾಗರಿಕರು ತಮ್ಮ ಖಾತಾ ವಿಭಜನೆ ಕಾರ್ಯಕ್ಕೆ ಹತ್ತಾರು ಕಿ.ಮೀ. ದೂರ ಕ್ರಮಿಸಿ ಸೌಲಭ್ಯ ಪಡೆಯಲು ಸಾಧ್ಯವಾಗದು. ಅಲ್ಲದೇ, ಬಿಡಿಎನ ಕಂದಾಯ ಇಲಾಖೆ ಕಚೇರಿಗಳಲ್ಲಿ ಅಧಿಕಾರಿ, ನೌಕರರ ಪ್ರಮಾಣ ಕಡಿಮೆ ಇದೆ. ಹಾಗಾಗಿ ನಾಗರಿಕರು ಒಂದು ಸಣ್ಣ ಕೆಲಸಕ್ಕೆ ಹತ್ತಾರು ದಿನ ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗುವುದನ್ನು ತಪ್ಪಿಸಲು ಹಾಲಿ ವ್ಯವಸ್ಥೆಯನ್ನೇ ಮುಂದುವರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net