ತುಕ್ಕು ಹಿಡಿದ ಗ್ರಾಪಂನ ತ್ಯಾಜ್ಯ ಸಂಗ್ರಹ ವಾಹನ

jlr sabe 29
Published on

ಜಗಳೂರು: ಕಸ ವಿಲೇವಾರಿ ಘಟಕ ನಿರ್ವಣಕ್ಕೂ ಮುನ್ನವೇ ಕಸ ವಿಲೇವಾರಿಗೆ ಖರೀದಿಸಿದ ಆಪೇ ಆಟೋ ಮೂರು ವರ್ಷಗಳಿಂದ ಮೂಲೆ ಸೇರಿ ತುಕ್ಕು ಹಿಡಿದಿದೆ. ಈವರೆಗೂ ಕಸ ಸಂಗ್ರಹ ಡಬ್ಬಿಗಳನ್ನು ವಿತರಣೆ ಮಾಡದೇ ಅಧಿಕಾರಿಗಳು ಲಕ್ಷಾಂತರ ರೂ. ನಷ್ಟ ಮಾಡಿದ್ದಾರೆ ಎಂದು ಗ್ರಾಪಂ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ತಾಲೂಕಿನ ಬಿಸ್ತುವಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ಗ್ರಾಮಗಳ ಸ್ವಚ್ಛತೆಗೆ ಸರ್ಕಾರ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿ ಕಸ ಸಂಗ್ರಹ ಮಾಡಲು ವಾಹನಗಳ ಖರೀದಿಗೆ ಸರ್ಕಾರ ಅವಕಾಶ ನೀಡಿದೆ. ಆದರೆ ಹಿಂದಿನ ಪಿಡಿಒ ಕೊಟ್ರೇಶ್ ಅವರು ಸದಸ್ಯರ ಗಮನಕ್ಕೂ ತರದೇ ಏಕಪಕ್ಷೀಯವಾಗಿ ವಾಹನ ಖರೀದಿಸಿದ್ದಾರೆ. ಅಲ್ಲದೇ ಕಸ ಸಂಗ್ರಹಕ್ಕೆ ಮನೆಗಳಿಗೆ ಡಬ್ಬಿಗಳನ್ನು ನೀಡಿಲ್ಲ ಎಂದು ಸದಸ್ಯರಾದ ಚಿತ್ತಪ್ಪ, ಜಾಫರ್ ಆರೋಪಿಸಿದರು.

ಪಿಡಿಒ ಸುನೀತಾ ಮಾತನಾಡಿ, ಮೂರು ವರ್ಷಗಳ ಹಿಂದೆಯೇ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಣಕ್ಕೆ ಸ್ಥಳ ನಿಗದಿ ಮಾಡಿ ಕೈ ಬಿಟ್ಟಿದ್ದಾರೆ. ಕಾಮಗಾರಿ ನಡೆಯದಿರುವುದು ನನಗೆ ಗೊತ್ತಿಲ್ಲ. ಇದೀಗ ಬಿದರಕೆರೆ ಗ್ರಾಪಂನ ಘಟಕಕ್ಕೆ ಹೊಂದಾಣಿಕೆ ಮಾಡಿಕೊಂಡು ಕಸ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೇಸಿಗೆಯಲ್ಲಿ ಗ್ರಾಮದ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು, ನೈರ್ಮಲ್ಯ ಕಾಪಾಡಲು ಚರಂಡಿಗಳ ಸ್ವಚ್ಛತೆ ಮಾಡಲಾಗಿದೆ. ಬೀದಿಗಳಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಗ್ರಾಪಂ ಕಾರ್ಯದರ್ಶಿ ಭರಮನಗೌಡ, ಗ್ರಾಪಂ ಅಧ್ಯಕ್ಷೆ ಕೆ. ಮಾಣಿ, ಸದಸ್ಯರಾದ ಎಂ.ಜಿ. ಬೋಗೇಶ್ವರಪ್ಪ, ಬಿ. ರಾಧಾ, ಎಚ್. ಶೋಭಾ, ಬಿ. ಅಂಜಿನಪ್ಪ, ಬಿ. ಮಾಯಪ್ಪ, ಶಾಮಲಮ್ಮ, ಕುಬೇರಪ್ಪ, ಲೋಲಾಕ್ಷಮ್ಮ ಸೇರಿ ಮತ್ತಿತರರಿದ್ದರು.

ಪಂಚಾಯಿತಿಗೆ ಮನೆಗಳಿಲ್ಲ: ಹಿಂದಿನ ಬಿಜೆಪಿ ಮತ್ತು ಇಂದಿನ ಕಾಂಗ್ರೆಸ್ ಸರ್ಕಾರ ಫಲಾನುಭವಿಗಳಿಗೆ ಮನೆ ಮಂಜೂರು ಮಾಡದೇ ಬಡವರಿಗೆ ಅನ್ಯಾಯ ಮಾಡಿವೆ. ಕೇರಳ, ತಮಿಳುನಾಡು, ಆಂದ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ 5 ಲಕ್ಷದವರೆಗೂ ಅನುದಾನ ನೀಡಿ ಮನೆ ನಿರ್ವಿುಸಿಕೊಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ 2 ಲಕ್ಷ ರೂ. ದಾಟಿಲ್ಲ. ಈಗಾಗಲೇ ಕಟ್ಟಿಸಿರುವ ಮನೆಗಳಿಗೆ ಸರಿಯಾಗಿ ಬಿಲ್ ಆಗುತ್ತಿಲ್ಲವೆಂದು ಸರ್ವ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ತೆರಿಗೆ ವಸೂಲಿಗೆ ಒತ್ತಾಯ: ಗ್ರಾಪಂ ವ್ಯಾಪ್ತಿಯ 11 ಗ್ರಾಮಗಳಲ್ಲಿ ವಿವಿಧ ಕಂಪನಿಗಳಿಂದ 11 ಕಡೆ ವಿಂಡ್​ಫ್ಯಾನ್​ಗಳನ್ನು ಅಳವಡಿಸಲಾಗಿದ್ದು, ಸುಮಾರು 2,40,000 ರೂ. ಕಂದಾಯ ಸಂಗ್ರಹವಾಗಿದೆ. ಎರಡು ಕಡೆ ಸೋಲಾರ್ ಹಾಕಲಾಗಿದ್ದು ಅವರಿಂದ 47 ಸಾವಿರ ಕಂದಾಯ ಪಾವತಿಯಾಗಿದೆ ಎಂದು ಪಿಡಿಒ ಸುನೀತಾ ತಿಳಿಸಿದರು.

ಅಧಿಕಾರ ಹಸ್ತಾಂತರ ಗೊಂದಲ: ಹಿಂದಿನ ಪಿಡಿಒ ಕೊಟ್ರೇಶ್ ಅವರು ಹೊಸದಾಗಿ ಬಂದಿರುವ ಸುನೀತಾ ಅವರಿಗೆ ಅಧಿಕಾರ ಹಸ್ತಾಂತರ ಮಾಡಿಲ್ಲ. ಹಾಗಾಗಿ ತಾಪಂ ಇಒ ಅವರಿಗೆ ಕರೆ ಮಾಡಿ ಚಾರ್ಜ್ ಕೊಡಿಸುವಂತೆ ಸದಸ್ಯರು ಮನವಿ ಮಾಡಿದರು. ಕೊಟ್ರೇಶ್ ಸರಿಯಾಗಿ ಕೆಲಸ ಮಾಡದೇ 15ನೇ ಹಣಕಾಸು ಸೇರಿ ವಿವಿಧ ಯೋಜನೆಯ ಸಾಕಷ್ಟು ಅನುದಾನ ದುರುಪಯೋಗ ಪಡಿಸಿಕೊಂಡಿದ್ದಾರೆ. ಅವರ ವಿರುದ್ಧ ತನಿಖೆ ನಡೆಸುವಂತೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸದಸ್ಯರು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net