

ದಾವಣಗೆರೆ: ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡಿರುವ ಗ್ರಾಮಸ್ಥರು, ಕೊನೆಗೆ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆ ಮೂಲಕ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಮತಾಂತರ ಪ್ರಯತ್ನಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ ಎನ್ನಲಾಗಿದೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹಿಂಡಸಘಟ್ಟ ಗ್ರಾಮದ ಮಟ್ಟಿ ಕ್ಯಾಂಪ್ನಲ್ಲಿ ಮತಾಂತರಕ್ಕೆ ಪ್ರಯತ್ನ ಮಾಡುತ್ತಿದ್ದ ಇಬ್ಬರು ಪಾಸ್ಟರ್ಗಳನ್ನು ಗ್ರಾಮದ ಮುಖಂಡರು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಟ್ಟಿ ಕ್ಯಾಂಪ್ನ ಮನೆಯೊಂದರಲ್ಲಿ ಯಜಮಾಣ ಅನಾರೋಗ್ಯದಿಂದ ನರಳುತ್ತಿದ್ದಾಗ ಏಸುವಿನ ಪ್ರಾರ್ಥನೆ ಮಾಡಿದರೆ ಗುಣವಾಗುತ್ತದೆ ಎಂದು ಈ ಪಾಸ್ಟರ್ಗಳು ನಂಬಿಸಿದ್ದರು. ಮಾತ್ರವಲ್ಲ ಮಟ್ಟಿ ಕ್ಯಾಂಪ್ನ ಜನರ ಹಿಂದೆ ಹಲವು ದಿನಗಳಿಂದ ಬಿದ್ದಿರುವ ಇವರು ಮತಾಂತರಕ್ಕೆ ನಿರಂತರ ಪ್ರಯತ್ನ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಗ್ರಾಮದ ಮುಖಂಡರು ಅವರ ಪ್ರಯತ್ನಕ್ಕೆ ಆಕ್ಷೇಪಿಸಿ, ಮಲೆಬೆನ್ನೂರು ಪೊಲೀಸರಿಗೆ ಒಪ್ಪಿಸಿದ್ದಾರೆ.