

ಕುಮಟಾ: ವಿದ್ಯಾರ್ಥಿಗಳ ಪ್ರತಿಭಾ ವಿಕಸನಕ್ಕೆ ವಸ್ತು ಪ್ರದರ್ಶನದಂತಹ ರಚನಾತ್ಮಕ ಚಟುವಟಿಕೆಗಳು ಅತ್ಯಂತ ಸಹಕಾರಿಯಾಗಿದೆ ಎಂದು ಬಿಇಒ ರಾಜೇಂದ್ರ ಎಲ್. ಭಟ್ ಹೇಳಿದರು.
ಇಲ್ಲಿನ ಕೆನರಾ ಕಾಲೇಜು ಸೊಸೈಟಿಯ ಡಾ.ಎ.ವಿ. ಬಾಳಿಗಾ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಜಿಲ್ಲಾಮಟ್ಟದ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ವಸ್ತು ಪ್ರದರ್ಶನದಲ್ಲಿ ಮಕ್ಕಳ ಪ್ರತಿಭೆ ಅನಾವರಣಗೊಂಡಿದೆ ಎಂದರು.
ಕೆನರಾ ಕಾಲೇಜು ಸೊಸೈಟಿಯ ಉಪಾಧ್ಯಕ್ಷ ಡಿ.ಎಂ. ಕಾಮತ, ಕಾರ್ಯಾಧ್ಯಕ್ಷ ಹನುಮಂತ ಶಾನಭಾಗ ವಸ್ತುಪ್ರದರ್ಶನದಲ್ಲಿ ಮಕ್ಕಳ ಮತ್ತು ಶಿಕ್ಷಕರ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಸಮಾಜ ವಿಜ್ಞಾನ. ದೈಹಿಕ ಶಿಕ್ಷಣ ಮತ್ತು ಭಾಷಾ ಜ್ಞಾನದ ಮೇಲೆ ವಸ್ತು ಪ್ರದರ್ಶಿಸಿದರೆ, ಪ್ರೌಢಶಾಲಾ ವಿದ್ಯಾರ್ಥಿಗಳು ವಿಜ್ಞಾನದ ವಸ್ತು ಪ್ರದರ್ಶಿಸಿದರು. ಸಂಪ್ರದಾಯ ಮತ್ತು ಆಧುನಿಕ ಬಳಕೆಯ ವಸ್ತುಗಳ ಪ್ರದರ್ಶನವೂ ಗಮನ ಸೆಳೆಯಿತು.
ವಸ್ತು ಪ್ರದರ್ಶದಲ್ಲಿ ಮಾನವನ ಎಲುಬು ರಚನೆ, ಸೋಲಾರ್ ಸಿಸ್ಟಮ್ ಸಾಂಪ್ರದಾಯಿಕ ಬಿಸುಕಲ್ಲು, ತಾಜಮಹಲ್, ಹಂಪೆಯ ಅರಮನೆ, ರಥ, ಮೈಸೂರು ಅರಮನೆ ಇತ್ಯಾದಿ, ರಸಾಯನ ಶಾಸ್ತ್ರ, ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದ ಸಂಶೋಧನಾತ್ಮಕ ಸಂಗತಿಗಳ ಪ್ರದರ್ಶನವು ಜಾಗತಿಕ ಭವಿಷ್ಯದ ದೃಷ್ಟಿಕೋನದ ಅನಾವರಣವಾಯಿತು.
ವಸ್ತು ಪ್ರದರ್ಶನವನ್ನು ತಾಲೂಕಿನ ಹಲವು ಶಾಲೆಯ ವಿದ್ಯಾರ್ಥಿಗಳು ವೀಕ್ಷಿಸಿದರು. ವಸ್ತು ಪ್ರದರ್ಶನವನ್ನು ಬಾಳಿಗಾ ಶಾಲೆಯ ಮುಖ್ಯಶಿಕ್ಷಕಿ ಜೈಲಕ್ಷ್ಮೀ ಮತ್ತು ಶಿಕ್ಷಕ ವೃಂದ ಸಂಯೋಜಿಸಿದೆ.