

ಮುಳಗುಂದ: ನಮ್ಮೆಲ್ಲರ ಬಾಳಿಗೆ ಬೆಳಕಾಗುವ ಹಾಗೂ ಜಗತ್ತಿಗೆ ಲೇಸು ಬಯಸುವ ಗುರುವನ್ನು ಗುರು ಪೌರ್ಣಿಮೆಯ ವಿಶೇಷ ದಿನದಂದು ಎಲ್ಲರೂ ಶ್ರದ್ಧೆಯಿಂದ ನಮಿಸಬೇಕು ಎಂದು ಶಿಕ್ಷಕಿ ಸುಧಾ ಹಿರೇಮಠ ಹೇಳಿದರು.
ಸಮೀಪದ ನೀಲಗುಂದ ಗುದ್ನೇಶ್ವರ ಮಠದಲ್ಲಿ ದಿವ್ಯ ಚೇತನ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗುರುವಿನ ಕುರಿತು ಮಾತನಾಡಿದ ವಿದ್ಯಾರ್ಥಿಗಳು, ಪ್ರತಿ ಮನುಷ್ಯನಿಗೂ ಗುರು ಬೇಕು. ತಾಯಿ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ ಎನ್ನುವಂತೆ ತಂದೆ-ತಾಯಿಯಿಂದ ಹಿಡಿದು ಅಕ್ಷರ ಕಲಿಸಿದ ಶಿಕ್ಷಕರು, ಸಂಸ್ಕಾರ ನೀಡಿದ ಪೂಜ್ಯರು ಸೇರಿ ಎಲ್ಲರನ್ನೂ ದೇವರ ಸಮಾನರಾಗಿ ಕಾಣಬೇಕು. ಅಂಥ ಸತ್ಸಂಪ್ರದಾಯ ಹಾಕಿಕೊಟ್ಟ ನಮ್ಮ ನಾಡಿಗೆ ನಾವೆಲ್ಲರೂ ಚಿರಋಣಿಯಾಗಿರಬೇಕು ಎಂದರು.
ದಿವ್ಯ ಚೇತನ ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಸಾರ್ವಜನಿಕರಿಂದ ಸನ್ಮಾನಿಸ ಸ್ವೀಕರಿಸಿದ ಗುದ್ನೇಶ್ವರ ಮಠದ ಪ್ರಭುಲಿಂಗ ಸ್ವಾಮೀಜಿ ಮಾತನಾಡಿ, ಬದುಕಿನ ಪ್ರತಿಕ್ಷಣ ಗುರುವಿನ ಅನುಗ್ರಹ ಎಲ್ಲರ ಮೇಲೂ ಇರುತ್ತದೆ. ಗುರು ಎಂಬುದು ಮನುಷ್ಯ ಜೀವರಾಶಿಗೆ ಸಂಸ್ಕೃತಿ ಪರಂಪರೆಗಳು ನೀಡಿರುವ ಕೊಡುಗೆಯಾಗಿದೆ. ಪ್ರತಿಯೊಬ್ಬರ ಏಳಿಗೆ ಬಯಸುವವನು ಗುರು. ಎಲ್ಲರ ಜೀವನ ಪ್ರಸನ್ನವಾಗಿ ಬೆಳಗಬೇಕು ಎಂದರು. ಸಂಗೀತ ಸೇವೆ ನೀಡಿದ ವಿಜಯಲಕ್ಷ್ಮೀ ಹಿರೇಮಠ, ಸುಧಾ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಮುತೈದೆಯರಿಗೆ ಉಡಿ ತುಂಬುವ ಹಾಗೂ ಶಾಲಾ ಮಕ್ಕಳಿಂದ ಗುರು ಪೂರ್ಣಿಮೆ ವಿಶೇಷತೆಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.