ಒಬಿಸಿ ಮೀಸಲಾತಿ ಇಕ್ಕಟ್ಟು: ತಾಪಂ, ಜಿಪಂ ಚುನಾವಣೆ ಸವಾಲು- ಆಯೋಗ ರಚನೆ ಅನಿವಾರ್ಯ

OBC
Published on

ಬೆಂಗಳೂರು: ಸ್ಥಳಿಯ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ವಿಚಾರ ರಾಜ್ಯ ಸರ್ಕಾರವನ್ನು ಅಡಕತ್ತರಿಯಲ್ಲಿ ಸಿಲುಕಿಸಿದ್ದು, ಪ್ರತ್ಯೇಕ ಆಯೋಗವೊಂದರ ರಚನೆಯೇ ಇದಕ್ಕೆ ಪರಿಹಾರವಾಗಿದೆ. ಹೀಗಾಗಿ ಆಯೋಗದ ವರದಿಯೊಂದಿಗೆ ಸುಪ್ರೀಂಕೋರ್ಟ್​ ಮೆಟ್ಟಿಲು ಹತ್ತಲು ಚರ್ಚೆಯಾಗಿದೆ. ಜಿಪಂ ಹಾಗೂ ತಾಪಂನಲ್ಲಿ ಒಬಿಸಿ ಮೀಸಲಾತಿ ಬಿಟ್ಟು ಚುನಾವಣೆ ನಡೆಸಲಾಗದ ಸ್ಥಿತಿ ಒಂದೆಡೆಯಾದರೆ, ಸುಪ್ರೀಂಕೋರ್ಟ್​ ನೀಡಿರುವ ತೀರ್ಪನ್ನು ಮೀರಲಾಗದ ಸ್ಥಿತಿ ಮತ್ತೊಂದು ಕಡೆ ಇದೆ. ಆದ್ದರಿಂದ ಪರ್ಯಾಯ ಮಾರ್ಗಗಳತ್ತ ಸರ್ಕಾರ ಚಿತ್ತ ಹರಿಸಿದೆ.

ಸಂದಿಗ್ಧತೆಗೆ ಕಾರಣ: ರಾಜ್ಯದ 31 ಜಿಲ್ಲಾ ಪಂಚಾಯಿತಿ, 232 ತಾಲೂಕು ಪಂಚಾಯಿತಿಗಳಿಗೆ 2021ರ ಜೂನ್​ನಲ್ಲಿ ಅವಧಿ ಮುಕ್ತಾಯವಾಗಿದೆ. ನಿಯಮಗಳ ಪ್ರಕಾರ ಆರು ತಿಂಗಳಿಗಿಂತ ಹೆಚ್ಚು ಕಾಲ ಖಾಲಿ ಬಿಡುವಂತಿಲ್ಲ. ಆದರೂ ಸರ್ಕಾರ ಕ್ಷೇತ್ರ ಪುನವಿರ್ಂಗಡನೆಯ ನೆಪದಲ್ಲಿ ಆಡಳಿತಾಧಿಕಾರಿಗಳ ಅವಧಿ ವಿಸ್ತರಣೆ ಮಾಡಿತ್ತು. ಚುನಾವಣೆ ನಡೆಸಲು ಸಿದ್ಧತೆ ನಡೆಸುವ ವೇಳೆಗೆ ಸುಪ್ರೀಂಕೋರ್ಟ್​ ತೀರ್ಪು ಸರ್ಕಾರದ ಸಂದಿಗ್ಧತೆಗೆ ಕಾರಣವಾಗಿದೆ. ಸಂವಿಧಾನದ 243(ಡಿ) ಮತ್ತು 243 (ಟಿ) ಪ್ರಕಾರ ದುರ್ಬಲ ವರ್ಗಗಳಿಗೆ ಸ್ಥಳಿಯ ಸಂಸ್ಥೆಗಳಿಗೆ ಮೀಸಲಾತಿ ನೀಡಬೇಕು ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಿದೆ. ಅದರ ಆಧಾರದಲ್ಲಿಯೇ ಪಂಚಾಯತ್​ರಾಜ್​ ಕಾಯ್ದೆ ರಚನೆಯಾಗಿದೆ. ಈಗ ಮೀಸಲಾತಿ ನೀಡದಿದ್ದರೆ ಸಂವಿಧಾನ ಹಾಗೂ ಕಾಯ್ದೆಗೆ ವಿರೋಧವಾಗುತ್ತದೆ. ಮೀಸಲಾತಿ ನೀಡುವುದಕ್ಕೆ ಸುಪ್ರೀಂಕೋರ್ಟ್​ ವಿಧಿಸಿರುವ ಕೆಲವೊಂದು ಷರತ್ತುಗಳನ್ನು ಉಲ್ಲಂನೆ ಮಾಡಲಾಗದ ಸ್ಥಿತಿಯಲ್ಲಿ ಸರ್ಕಾರ ಇದೆ. ಸುಪ್ರೀಂಕೋರ್ಟ್​ನಲ್ಲಿ 2010ರಲ್ಲಿ ಕೆ. ಕೃಷ್ಣಮೂರ್ತಿ ಪ್ರಕರಣದ ತೀರ್ಪು ಬಂದ ನಂತರ ಸರ್ಕಾರಗಳು ಮೀಸಲಾತಿಗೆ ಸಂಬಂಧಿಸಿದಂತೆ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕಾಗಿತ್ತು. ಆದರೆ ಎಲ್ಲ ರಾಜ್ಯಗಳು ನಿರ್ಲಕ್ಷ್ಯ ಮಾಡಿದ್ದರಿಂದ 2021ರಲ್ಲಿ ರಾಹುಲ್​ ಗೌಳಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ಮಾನದಂಡಗಳನ್ನು ರೂಪಿಸಿ ಮೀಸಲಾತಿ ನೀಡಿ ಚುನಾವಣೆ ನಡೆಸಬೇಕು. ಇಲ್ಲದಿದ್ದರೆ ಪರಿಶಿಷ್ಟ ಜಾತಿ ಮತ್ತು ವರ್ಗ, ಸಾಮಾನ್ಯ ವರ್ಗಕ್ಕೆ ಮಾತ್ರ ಮೀಸಲಾತಿ ಎಂದು ಹೇಳಿದೆ.

ಸಂಪುಟದಲ್ಲಿ ಚರ್ಚೆ: ಸುಪ್ರೀಂಕೋರ್ಟ್​ ತೀಪಿರ್ನ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​. ಈಶ್ವರಪ್ಪ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ವಿವರ ನೀಡಿದ್ದಾರೆ. ಮುಂದಿನ ಸಚಿವ ಸಂಪುಟ ಸಭೆ ನಂತರ ಹಿರಿಯ ಸಚಿವರು ಕುಳಿತು ಸಮಸ್ಯೆಗೆ ಪರಿಹಾರ ಕಂಡು ಹಿಡಿಯೋಣ, ಅದಕ್ಕೂ ಮೊದಲು ಅಧಿಕಾರಿಗಳು ಮತ್ತು ಕಾನೂನು ತಜ್ಞರು ಚರ್ಚೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಿ ಎಂದು ಸೂಚನೆ ನೀಡಿದ್ದಾರೆ. ಆದ್ದರಿಂದಲೇ ಸೋಮವಾರ ಅಧಿಕಾರಿಗಳ ಸಭೆ ನಡೆಯಲಿದೆ.

ಸರ್ಕಾರಕ್ಕಿರುವ ಆಯ್ಕೆ: ಹಿಂದುಳಿದ ವರ್ಗಗಳಿಗೆ ಮೀಸ ಲಾತಿ ನೀಡಲು ಮಾನದಂಡಗಳೇನು? ಸಮೀೆ ಮೂಲಕ ಮಾನದಂಡ ನಿಗದಿ ಮಾಡಲಾಗಿದೆಯೇ? ಯಾವ ಯಾವ ಜಾತಿಗೆ ಮೀಸಲಾತಿ ನೀಡಬೇಕಾಗುತ್ತದೆ ಎಂಬುದನ್ನು ನಿರ್ಧರಿಸಲಾಗಿದೆಯೇ? ಎಂಬುದು ಸುಪ್ರೀಂ ಪ್ರಶ್ನೆಯಾಗಿದೆ. ಪ್ರತ್ಯೇಕ ಆಯೋಗ ರಚಿಸುವ ಮೂಲಕ ಜಾತಿವಾರು ವಿವರ ಸಂಗ್ರಹಿಸಿ ಮಾನದಂಡ ನಿಗದಿ ಮಾಡುವ ಬಗ್ಗೆಯೂ ಸರ್ಕಾರದಲ್ಲಿ ಚರ್ಚೆಯಾಗುತ್ತಿದೆ. ಸುಪ್ರೀಂ ಮೀಸಲಾತಿ ನೀಡಲೇಬಾರದೆಂದು ಹೇಳಿಲ್ಲ, ಆದರೆ ಮಾನದಂಡಗಳೇನು ಎಂಬ ಪ್ರಶ್ನೆ ಮಾಡಿದೆ. ಆದ್ದರಿಂದಲೇ ಸರ್ಕಾರ ಈ ಮಾಗೋರ್ಪಾಯಕ್ಕೆ ಮುಂದಾಗಿದೆ ಎಂದು ಮೂಲಗಳು ಹೇಳಿವೆ.

ತಜ್ಞರ ಸಲಹೆ ಮುಖ್ಯ: ಸರ್ಕಾರ ಒಬಿಸಿ ಮೀಸಲಾತಿ ನೀಡದೆ ಚುನಾವಣೆ ನಡೆಸುವುದಿಲ್ಲವೆಂದು ಸ್ಪಷ್ಟವಾಗಿ ಹೇಳುತ್ತಿದೆ. ಆದ್ದರಿಂದಲೇ ಕಾನೂನು ತಜ್ಞರು ನೀಡುವ ಸಲಹೆ ಮುಖ್ಯವಾಗಿದೆ.

ಮಹಿಳಾ ಮೀಸಲಾತಿ: ಸ್ಥಳಿಯ ಸಂಸ್ಥೆಗಳಲ್ಲಿ ಶೇ.50 ಮಹಿಳಾ ಮೀಸಲಾತಿ ಇದೆ. ಆದರೆ ಅಂತಿಮವಾಗಿ ಇದು ಶೇ.52 ರಿಂದ 54 ರಷ್ಟು ಮುಟ್ಟುತ್ತಿತ್ತು. ಈಗ ಮಹಿಳಾ ಮೀಸಲಾತಿ ಏನಾಗಲಿದೆ ಎಂಬ ಪ್ರಶ್ನೆ ಎದುರಾಗಿದೆ.

ಸುಪ್ರೀಂಗೂ ಮನವಿ: ಸರ್ಕಾರ ಮುಂದಿನ ದಿನಗಳಲ್ಲಿ ಸುಪ್ರೀಂಕೋರ್ಟ್​ನಲ್ಲಿ ಹೊಸ ಮಾನದಂಡಗಳ ಪ್ರಕಾರ ಚುನಾವಣೆ ನಡೆಸುವುದಾಗಿ ಮನವಿ ಮಾಡಲಿದೆ. ಅದರ ಜತೆಗೆ ಶೇ.50 ಮೀಸಲಾತಿ ದಾಟಬಾರದೆಂಬ ಅಭಿಪ್ರಾಯವನ್ನು ಹಿಂದಕ್ಕೆ ಪಡೆಯುವಂತೆಯೂ ಕೋರಲಿದೆ ಎಂದು ಮೂಲಗಳು ಖಚಿತಪಡಿಸಿವೆ.

ಪರ್ಯಾಯ ಮಾರ್ಗಗಳತ್ತ ಚಿತ್ತ

ಒಬಿಸಿ ಮೀಸಲಾತಿಯೊಂದಿಗೆ ಚುನಾವಣೆ ನಡೆಸ ಬೇಕೆಂಬುದು ಸರ್ಕಾರದ ಸ್ಪಷ್ಟ ನಿಲುವು. ಅದಕ್ಕಾಗಿಯೇ ಸುಪ್ರೀಂ ಆದೇಶ ಗಮನದಲ್ಲಿಟ್ಟುಕೊಂಡು ಪರ್ಯಾಯ ಮಾರ್ಗ ಶೋಧಿಸಲು ಸೋಮವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್​ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಕಾನೂನು ಕಾರ್ಯದರ್ಶಿ, ಅಡ್ವೋಕೇಟ್​ ಜನರಲ್​ ಅವರನ್ನೊಳಗೊಂಡ ಅಧಿಕಾರಿ ಗಳ ಸಭೆ ನಡೆಯಲಿದೆ. ಆ ಸಭೆಯಲ್ಲಿ ಚರ್ಚೆ ನಡೆಸಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

ಜಾತಿಗಣತಿಗೂ ಮಾನ್ಯತೆ

ಹಿಂದುಳಿದ ವರ್ಗಗಳ ಆಯೋಗ ಕಾನೂನು ತಜ್ಞ ಎಚ್​. ಕಾಂತರಾಜ್​ ಅಧ್ಯಕ್ಷತೆಯಲ್ಲಿ ನಡೆಸಿದ ಜಾತಿಗಣತಿ ವರದಿಗೂ ಈಗ ಮಾನ್ಯತೆ ಸಿಗಬಹುದಾಗಿದೆ. ಆ ವರದಿಯಲ್ಲಿ ಪ್ರತಿಯೊಂದು ಜಾತಿಯ ನಿಖರವಾದ ಅಂಕಿಅಂಶ ಸಿಗಬಹುದೆಂದು ಸರ್ಕಾರ ಅಂದಾಜು ಮಾಡುತ್ತಿದೆ. ಪ್ರತ್ಯೇಕ ಆಯೋಗ ಮಾಡಿ, ಅದಕ್ಕೆ ಈ ಜಾತಿಗಣತಿ ವರದಿಯನ್ನು ನೀಡುವ ಮೂಲಕ ಮೀಸಲಾತಿಗೆ ಮಾನದಂಡ ನಿಗದಿ ಮಾಡಬಹುದೆಂದು ಅಧಿಕಾರಿಗಳು ಅಭಿಪ್ರಾಯಪಡುತ್ತಿದ್ದಾರೆ. ಹಿಂದೆ ಆಯೋಗದ ಈ ವರದಿಯನ್ನು ಸ್ವೀಕಾರ ಮಾಡಲು ಸರ್ಕಾರ ಹಿಂದೇಟು ಹಾಕಿತ್ತು. ಆದರೆ ಈಗ ಅನಿವಾರ್ಯ ಸ್ಥಿತಿ ಎದುರಾಗಿದೆ.

ತಾಲೂಕು, ಜಿಲ್ಲಾ ಪಂಚಾಯತ್​ ಚುನಾವಣೆಗೆ ಸಂಬಂಧಿಸಿ ದಂತೆ ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಅದರ ಪರಿಣಾಮಗಳೇನು, ರಾಜ್ಯದ ಸ್ಥಿತಿಗತಿ ಬಗ್ಗೆ ಚಚಿರ್ಸಲು ಸಭೆ ಕರೆಯಲಾಗುವುದು. ರಾಜ್ಯದಲ್ಲಿ ಇತರ ಹಿಂದುಳಿದ ವರ್ಗಗಳಿಗೆ ನೀಡಲಾಗಿರುವ ಮೀಸಲಾತಿಯನ್ನು ಉಳಿಸಿಕೊಂಡು ಚುನಾವಣೆಯನ್ನು ಯಾವ ರೀತಿ ಮಾಡಬೇಕೆಂದು ತೀರ್ಮಾನಿಸಲಾಗುವುದು.

| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ನಿಖರವಾದ ಅಂಕಿಅಂಶ ಪಡೆದು ಮಾನದಂಡ ರೂಪಿಸಿ ಚುನಾವಣೆ ನಡೆಸುವುದೊಂದೇ ಸರ್ಕಾರಕ್ಕಿರುವ ದಾರಿ. ಮೀಸಲಾತಿ ನಿರಾಕರಿಸುವುದಕ್ಕೂ ಸಂವಿಧಾನದಲ್ಲಿ ಅವಕಾಶವಿಲ್ಲ. ಸರ್ಕಾರ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾಗಿದೆ.

| ಎಚ್​. ಕಾಂತರಾಜ್​ ಮಾಜಿ ಅಧ್ಯಕ್ಷ, ಹಿಂದುಳಿದ ವರ್ಗಗಳ ಆಯೋಗ

ರಾಜಕೀಯ ಮೀಸಲಾತಿ ನೀಡುವ ಅಧಿಕಾರ ನಮ್ಮ ಆಯೋಗಕ್ಕೆ ಇಲ್ಲ. ಸುಪ್ರೀಂ ಕೋರ್ಟ್​ ತೀಪಿರ್ನ ಆಧಾರದಲ್ಲಿ ಸರ್ಕಾರ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ.

| ಜಯಪ್ರಕಾಶ್​ ಹೆಗ್ಡೆ

ಅಧ್ಯಕ್ಷ, ಹಿಂದುಳಿದ ವರ್ಗಗಳ ಆಯೋಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net