ಡಿಸೆಂಬರ್‌ನಿಂದ ಒಬಿಸಿ ಸಮಾವೇಶ

IMG_20221101_161036 (1)1133
Published on

ಚಿತ್ರದುರ್ಗ:ರಾಹುಲ್ ಗಾಂಧಿ ಅವರ ಹೆಸರನ್ನು ಅತ್ಯಂತ ಕೀಳುಮಟ್ಟಕ್ಕೆ ಕೊಂಡೊಯ್ದು ಮಸಿ ಬಳಿಯುವ ಪಿತೂರಿಯನ್ನು ಬಿಜೆಪಿ ಸಾಮಾಜಿಕ ಜಾಲತಾಣಗಳ ಮೂಲಕ ಮಾಡುತ್ತಿದ್ದು, ಅದಕ್ಕೆ ಭಾರತ್ ಜೋಡೋ ಪಾದಯಾತ್ರೆ ಉತ್ತರ ಕೊಟ್ಟಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ, ಧರ್ಮ ಬಿಟ್ಟು ಮಾನವೀಯ ನೆಲೆಗಟ್ಟಿನ ಮೇಲೆ ಪಾದಯಾತ್ರೆ ಸಾಗುತ್ತಿದೆ. ಸೋಲು-ಗೆಲುವು ಮುಖ್ಯವಲ್ಲ, ಭಾರತದ ಐಕ್ಯತೆ ದೃಷ್ಟಿಯಿಂದ ನಡೆಯುತ್ತಿದೆ. ಜನ ರಾಹುಲ್ ಪರವಾಗಿದ್ದು, ಪಕ್ಷಕ್ಕೆ ಹೊಸ ಚೈತನ್ಯ ತುಂಬುವ ಮೂಲಕ ಬಲವರ್ಧನೆಗೂ ಸಹಕಾರಿಯಾಗಲಿದೆ ಎಂದರು.

ದಮ್ಮು, ತಾಕತ್ತು ಇದ್ದರೆ ಎಂಬುದಾಗಿ ಬಸವರಾಜ್ ಬೊಮ್ಮಾಯಿ ಅವರು ಸವಾಲು ಹಾಕುತ್ತಾರೆ. ರಾಜ್ಯದ ಒಬ್ಬ ಮುಖ್ಯಮಂತ್ರಿಯಾಗಿ ಘನತೆಗೆ ತಕ್ಕ ಮಾತುಗಳನ್ನಾಡುತ್ತಿಲ್ಲ. ರಾಜ್ಯದಲ್ಲಿ ವ್ಯವಹಾರಿಕವಾಗಿ ಅಧಿಕಾರಕ್ಕೆ ಬಂದವರು ಅದನ್ನು ಹಿಂಪಡೆಯಲು ಕಾಮಗಾರಿಗಳಲ್ಲಿ ಶೇ 40ರಷ್ಟು ಪರ್ಸಂಟೇಜ್ ಪಡೆಯುತ್ತಿದ್ದಾರೆ. ಆಡಳಿತ ವ್ಯವಸ್ಥೆಯನ್ನೇ ವ್ಯಾಪಾರೀಕರಣ ಮಾಡಿಕೊಂಡು ಕೆಟ್ಟ ರಾಜಕೀಯಕ್ಕೆ ಮುಂದಾಗಿದ್ದಾರೆ. ಆದರೆ, ಭ್ರಷ್ಟಾಚಾರ ಮುಕ್ತ ದೇಶವನ್ನಾಗಿಸುತ್ತೇನೆ ಎನ್ನುವ ಪ್ರಧಾನಿ ಮೋದಿ ಅವರೇ ಮೌನವಹಿಸಿದ್ದಾರೆ ಎಂದು ದೂರಿದರು.

ರಾಜ್ಯದ ಜನರ ತೆರಿಗೆ ಹಣವನ್ನು ಲೂಟಿ ಮಾಡಲು ಹೊರಟಿರುವ ಬಿಜೆಪಿ ನಾಯಕರಿಗೆ ಮಾನ, ಮರ್ಯಾದೆ ಇಲ್ಲವಾಗಿದೆ. ಆಜಾನ್‌ಗೆ ಕಡಿವಾಣ ಹಾಕಿದ ನಂತರ ಮುಸ್ಲಿಂ ಸಮುದಾಯಕ್ಕಿಂತ ಹಿಂದುಗಳಿಗೆ ಹೆಚ್ಚು ಅನ್ಯಾಯವಾಗಿದೆ. ಶಾಂತಿ, ಸುವ್ಯವಸ್ಥೆ ಕಾಪಾಡುವುದು ಒಳಗೊಂಡಂತೆ ಎಲ್ಲಾ ಹಂತಗಳಲ್ಲೂ ಸಾಮಾಜಿಕ ನ್ಯಾಯ ಕೊಡುವಲ್ಲಿ ವಿಫಲರಾಗಿದ್ದಾರೆ. ಇಂಥವರನ್ನು ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸುತ್ತಿರುವ ಆರ್‌ಎಸ್‌ಎಸ್, ಬಜರಂಗದಳ, ವಿಶ್ವ ಹಿಂದು ಪರಿಷತ್ ಕಾರ್ಯಕರ್ತರೇ ಕಿತ್ತೊಗೆಯಿರಿ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಪಕ್ಷ ಸಂಘಟಿಸುವ ಉದ್ದೇಶದಿಂದ ನಿರ್ಲಕ್ಷಕ್ಕೆ ಒಳಗಾದ ಹಿಂದುಳಿದ ಸಮುದಾಯಗಳನ್ನು ಒಗ್ಗೂಡಿಸಿ ತಲಾ 25ರಿಂದ 50ಸಾವಿರ ಜನರನ್ನು ಸೇರಿಸಿ ಪ್ರತಿ ಜಿಲ್ಲೆಯಲ್ಲೂ, ಅದೇ ರೀತಿ ಐದಾರು ಲಕ್ಷ ಜನಸ್ತೋಮದೊಂದಿಗೆ ಬೆಂಗಳೂರು ಹೊರತುಪಡಿಸಿ ಸೂಕ್ತ ಸ್ಥಳ ಆಯ್ಕೆ ಮಾಡಿಕೊಂಡು ರಾಜ್ಯಮಟ್ಟದ ಹಿಂದುಳಿದ ವರ್ಗಗಳ ವಿಭಾಗದ ಸಮಾವೇಶ ಮಾಡಲಾಗುವುದು. ಡಿಸೆಂಬರ್‌ನಿಂದ ಆರಂಭವಾಗಿ ಜನವರಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಈಗಾಗಲೇ ತಾಲ್ಲೂಕು ಮಟ್ಟದಿಂದ ರಾಜ್ಯಮಟ್ಟದವರೆಗಿನ ವಿಭಾಗವನ್ನು ವಿಸರ್ಜಿಸಲಾಗಿದೆ. ಸಕ್ರಿಯರಾಗಿ ಉತ್ತಮ ಸೇವೆ ಮಾಡಿರುವ ವರನ್ನು ಮುಂದುವರೆಸಲಾಗುವುದು. ಹೊಸಬರಿಗೆ ಅವಕಾಶ ನೀಡಲಾಗುವುದು ಎಂದ ಅವರು, ಚುನಾವಣೆ ಸಮೀಪಿಸಿದಾಗ ಬಿಜೆಪಿ ನಾ ಯಕರಿಗೆ ಒಬಿಸಿ,ನಾರಾಯಣಗುರು ನೆನಪಾಗುತ್ತಾರೆ. ಆದ್ದರಿಂದ ಬಂಗಾರಪ್ಪ ಅಭಿಮಾನಿಗಳು ಪುನಃ ಕಾಂಗ್ರೆಸ್ ಸೇರುವ ಮೂಲಕ ಕೈ ಬಲಪಡಿಸಬೇಕು ಎಂದು ಕೋರಿದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ,ಮಾಜಿ ಶಾಸಕ ಎ.ವಿ.ಉಮಾಪತಿ, ಮಾಜಿ ಎಂಎಲ್‌ಸಿ ಜಯಮ್ಮ ಬಾಲರಾಜ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮುಖಂಡರಾದ ಎನ್.ಡಿ.ಕುಮಾರ್, ಕುಮಾರ್‌ಗೌಡ, ಡಿ.ಎನ್.ಮೈಲಾರಪ್ಪ, ನಾಗವೇಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net