ತುಂಗಾ ನಾಲೆ ಪರಿಶೀಲಿಸಿದ ಹೊನ್ನಾಳಿ ಎಸಿ

nyamathi
Published on

ಹದಿನೈದು ದಿನಗಳೊಳಗೆ ಕಾಲುವೆ ನಿರ್ಮಾಣ ವಿ.ಅಭಿಷೇಕ್ ಹೇಳಿಕೆ

ನ್ಯಾಮತಿ: ತಾಲೂಕಿನ ಬಸವನಹಳ್ಳಿ ಸಮೀಪ ಹರಿಯುವ ತುಂಗಾ ನಾಲೆಯ ದಂಡೆ ಒಡೆದಿರುವ ಸ್ಥಳಕ್ಕೆ ಹೊನ್ನಾಳಿ ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಸೋಮವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ನೂರಾರು ಎಕರೆ ಜಮೀನು ಜಲಾವೃತಗೊಂಡಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ, ವರದಿ ಪಡೆದು ನಷ್ಟವಾಗಿರುವ ರೈತರಿಗೆ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ನೀರಿನ ಹರಿವು ನಿಂತ ನಂತರ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಹತ್ತರಿಂದ ಹದಿನೈದು ದಿನದೊಳಗೆ ನಾಲೆ ಬದು ನಿರ್ಮಿಸಿ, ಬೆಳೆಗೆ ನೀರು ಕೊಡುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನ್ಯಾಮತಿ ತಹಸೀಲ್ದಾರ್ ಎಚ್.ಬಿ.ಗೋವಿಂದಪ್ಪ ಗೋವಿನಕೋವಿ, ಉಪ ತಹಸೀಲ್ದಾರ್ ಸವಿತಾ, ಆರ್‌ಐ ಸಂತೋಷ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಎ.ಎಸ್.ಪ್ರತಿಮಾ, ತೋಟಗಾರಿಕೆ ಇಲಾಖೆಯ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕಿ ರೇಖಾ, ನೀರಾವರಿ ಇಲಾಖೆಯ ಇಂಜಿನಿಯರ್, ರೈತರು ಇದ್ದರು.

ಪ್ರಮುಖಾಂಶಗಳು:

  1. ಮೊದಲು ಕಾಲುವೆಯಲ್ಲಿ ಚಿಕ್ಕದಾಗಿ ಕಾಣಿಕೊಂಡಿದ್ದ ನಾಲೆಯ ಬಿರುಕು ಏಕಾಏಕಿ ಒಡೆಯಿತು. ಹೆಚ್ಚಿನ ಅನಾಹುತ ತಪ್ಪಿಸಿದ ನೀರಾವರಿ ಇಲಾಖೆಯ ಇಂಜಿನಿಯರ್‌ಗಳು
  2. ಅಡಕೆ, ಭತ್ತ, ಹತ್ತಿ, ಮೆಕ್ಕೆಜೋಳ, ತರಕಾರಿ ಬೆಳೆಗಳು ಜಲಾವೃತ
  3. ನೀರಿನ ರಭಸಕ್ಕೆ ಎರಡು ಸೇತುವೆ, ಜಮೀನು ಸಂಪರ್ಕಿಸುವ ರಸ್ತೆ ನಾಶ
  4. ನಾಲೆ ಬಿರುಕು ಬಿಟ್ಟಿದ್ದು, 40 ರಿಂದ 50 ಅಡಿಗಳಷ್ಟು ಕಾಲುವೆ ಭಾಗದಲ್ಲಿ ಕಳಚಿ ಬೀಳುತ್ತಿರುವ ಮಣ್ಣು.
  5. ಮುಂಜಾಗ್ರತೆ ಕ್ರಮವಾಗಿ ಅನಿರ್ದಿಷ್ಟಾವಧಿ ವರೆಗೆ 144 ಸೆಕ್ಷನ್ ಜಾರಿ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net