

ನ್ಯಾಮತಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಂಗಳವಾರ ಮತ್ತು ಬುಧವಾರ ಜಿಟಿಜಿಟಿ ಮಳೆ ಸುರಿಯಿತು.
ಸೋಮವಾರ ರಾತ್ರಿಯಿಂದ ಆರಂಭವಾದ ಜಿಟಿಜಿಟಿ ಮಳೆ ಬುಧವಾರ ಆಗಾಗ್ಗೆ ಜೋರು ಶೀತಗಾಳಿಯೊಂದಿಗೆ ಮುಂದುವರೆದಿತ್ತು. ಜಾನೆಯಿಂದಲೂ ಮೋಡ ಕವಿದ ವಾತಾವರಣ ಮತ್ತು ನಿರಂತರ ಜಿಟಿಜಿಟಿ ಮಳೆಯಿಂದ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ.
ವಿದ್ಯಾರ್ಥಿಗಳು ಟೋಪಿ, ಜರ್ಕಿನ್ ಧರಿಸಿ ಶಾಲೆಗಳಿಗೆ ಕೊಡೆ ಹಿಡಿದು ತೆರಳಿದರು. ಕೃಷಿಕರು ಮಳೆಯ ನಡುವೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು.
ನ್ಯಾಮತಿ ತಾಲೂಕಿನ ಹಳೇಮಳಲಿ, ಚೀಲೂರು, ಕೋಟೆಹಾಳ್, ಮರಿಗೊಂಡನಹಳ್ಳಿ, ಕುರುವ, ಗೋವಿನಕೋವಿ ಗ್ರಾಮಗಳ ಮೂಲಕ ಹಾದು ಹೋಗುವ ತುಂಗಾಭದ್ರ ನದಿಯ ನೀರಿನ ಮಟ್ಟ ಹೆಚ್ಚಳವಾಗಿದೆ.
ಮಳೆಯ ವಿವರ: ಮಂಗಳವಾರ ತಾಲೂಕಿನ ಸವಳಂಗ 20.0 ಮಿ.ಮೀ., ಬೆಳಗುತ್ತಿ 4.4 ಮಿ.ಮೀ., ಗೋವಿನಕೋವಿ 3.2 ಮಿ.ಮೀ. ಮಳೆಯಾಗಿದೆ.