ಮತ್ತೆ ಆಡುಗಳ ರಕ್ತ ಹೀರಿದ ಚಿರತೆ; ಅರಣ್ಯ ಇಲಾಖೆ ಪಡೆಗೆ ತಲೆನೋವಾದ ಆಪರೇಷನ್ ಚೀತಾ

Nyamati, Jeenahalli, Kuri, Forest Department,
Published on

ನ್ಯಾಮತಿ: ಐದು ದಿನಗಳ ಹಿಂದೆ ಫಲವನಹಳ್ಳಿ ಬಳಿ ರೈತ ಮಹಿಳೆಯನ್ನು ಬಲಿ ಪಡೆದ ನರ ಹಂತಕ ಚಿರತೆ ಭಾನುವಾರ ಜೀನಹಳ್ಳಿ ಬಳಿ ಮೂರು ಆಡುಗಳನ್ನು ಎಳೆದೊಯ್ದಿದೆ.

ರೈತ ಮಹಿಳೆ ಕಮಲಾಬಾಯಿ ಚಿರತೆಗೆ ಆಹಾರವಾದ ಬಳಿಕ ಸುತ್ತಲಿನ ಗ್ರಾಮಸ್ಥರಲ್ಲಿ ಭಯ ಆವರಿಸಿತ್ತು. ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನಿಟ್ಟು, ಸಿಬ್ಬಂದಿ ನಿಯೋಜಿಸಿ ಕಸರತ್ತು ನಡೆಸಿದ್ದರೂ ಸಾಧ್ಯವಾಗಿಲ್ಲ.

ಕಳೆದ ನಾಲ್ಕೈದು ದಿನಗಳಿಂದ ಅಲ್ಲಿಲ್ಲಿ ಕಾಣಿಸಿಕೊಳ್ಳುತ್ತಿದೆ ಎಂಬ ಮಾಹಿತಿ ಬಿಟ್ಟರೆ ಹೆಚ್ಚಿನ ಪ್ರಗತಿ ಕಾಣದ ಕಾರಣ ದಿನ ಕಳೆದಂತೆ ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಿಂದ ಹಿಂದೆ ಸರಿಯತೊಡಗಿತ್ತು.

ಮೊದ ಮೊದಲು ಏಳೆಂಟು ಬೋನು, ಟ್ರಾೃಪಿಂಗ್ ಕ್ಯಾಮರಾ ಹಿಡಿದು ನಿದ್ದೆಗೆಟ್ಟು ಓಡಾಡಿದರೂ ಚಿರತೆ ಸೆರೆ ಸಿಗದ ಕಾರಣ ಈ ವ್ಯಾಪ್ತಿಯಿಂದ ದೂರ ಹೋಗಿರಬಹುದು ಎಂದೇ ಅರಣ್ಯ ಸಿಬ್ಬಂದಿ ಭಾವಿಸಿತ್ತು.

ಈಗ ಮತ್ತೆ ನ್ಯಾಮತಿ ಸಮೀಪದ ಜೀನಹಳ್ಳಿ ಗ್ರಾಮದ ಬಳಿ ಕಾಣಿಸಿಕೊಂಡಿದೆ. ಭಾನುವಾರ ಆಡುಗಳ ಮೇಲೆ ದಾಳಿ ನಡೆಸಿದೆ ಎಂದು ಆರ್‌ಎಫ್‌ಒ ಚೇತನ್‌ಕುಮಾರ್ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಅರಣ್ಯ ಸಿಬ್ಬಂದಿ ದೌಡಾಯಿಸಿದ್ದು, ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಗಡೆಕಟ್ಟೆ, ಜೀನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಕತ್ತಿಗೆ ಗ್ರಾಮದ ಬಳಿ ಹೊಸದಾಗಿ ಬೋನು ಇರಿಸಿದ್ದು, ಚಿರತೆ ಸೆರೆ ಹಿಡಿಯುವವರೆಗೂ ಜನರು ಎಚ್ಚರಿಕೆಯಿಂದ ಓಡಾಡುವಂತೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net