

ಹೊನ್ನಾಳಿ: ಧಾರಾಕಾರ ಮಳೆಯಿಂದ ಗೌಡನಕೆರೆ ಕೋಡಿ ಬಿದ್ದು ಸಂಕಷ್ಟಕ್ಕೆ ಸಿಲುಕಿದ ನ್ಯಾಮತಿ ತಾಲೂಕಿನ ಯರಗನಾಳ್ ಗ್ರಾಮಕ್ಕೆ ಶಾಸಕ ಡಿ.ಜಿ. ಶಾಂತನಗೌಡ, ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಇಟ್ನಾಳ್ ಮತ್ತಿತರ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿ, ಪರಿಹಾರ ಕ್ರಮಗಳನ್ನು ಕೈಗೊಂಡಿತು.
ಅತಿವೃಷ್ಟಿಯಿಂದ ಯರಗನಾಳ್ ಗ್ರಾಮದ ಗೌಡನ ಕೆರೆ ಭರ್ತಿಯಾಗಿ ಕೋಡಿ ಬಿದ್ದು ತಗ್ಗು ಪ್ರದೇಶದಲ್ಲಿರುವ ಗ್ರಾಮಕ್ಕೆ ಸೋಮವಾರ ರಾತ್ರಿ ಅಪಾರ ಪ್ರಮಾಣ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, 30ಕ್ಕೂ ಅಧಿಕ ಮನೆಗಳು, ಚರಂಡಿ, ರಸ್ತೆಗಳಿಗೆ ಹಾನಿಯಾಗಿದೆ.
ಕೂಡಲೇ ಎಚ್ಚೆತ್ತುಕೊಂಡ ತಾಲೂಕು ಆಡಳಿತ ಸ್ಥಳಕ್ಕೆ ಧಾವಿಸಿದ ರಾಜ್ಯ ವಿಪತ್ತು ನಿರ್ವಹಣ ತಂಡ, ಅಗ್ನಿಶಾಮಕ ದಳದ ಸಿಬ್ಬಂದಿ ಪರಿಹಾರ ಕಾರ್ಯಾಚರಣೆ ಕೈಗೊಂಡಿತು. ಸಮಸ್ಯೆಗೆ ಸಿಲುಕಿದ ಜನರನ್ನು ಗ್ರಾಮದ ಸಮುದಾಯ ಭವನದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ ಅವರಿಗೆ ಊಟ ವಸತಿ ಒದಗಿಸಿತು.
ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿದ ಶಾಸಕರು, ಅಧಿಕಾರಿಗಳೊಂದಿಗೆ ಹಾನಿಗೊಳಗಾದ ಎಲ್ಲ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂಬಂಧಿತ ಅಧಿಕಾರಿಗಳೊಂದಿಗೆ ಮಾತನಾಡಿ ಪರಿಹಾರ ಕ್ರಮ ಕೈಗೊಳ್ಳಲು ಸೂಚಿಸಿದರು. ನೀರು ಕಟ್ಟಿಕೊಂಡ ಗ್ರಾಮದ ಎಲ್ಲ ಕಾಲುವೆಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿ, ನೀರು ಸರಾಗವಾಗಿ ಹರಿಯುವಂತೆ ಮಾಡಿದರು.
ಈ ವೇಳೆ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ತಾಲೂಕಿನಲ್ಲಿ ಶಾಲಾ ಕೊಠಡಿಗಳ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳೊಂದಿಗೆ 8 ಬಾರಿ ಸಭೆ ನಡೆಸಿದ್ದು, ಈಗಾಲೇ 120 ಶಾಲಾ ಕೊಠಡಿಗಳ ದುರಸ್ತಿಗಾಗಿ 4 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಹೇಳಿದರು.
ಅತಿವೃಷ್ಟಿಯಿಂದ ಹಾಳಾಗಿರುವ ರಸ್ತೆ, ಚರಂಡಿ, ಮೂಲಸೌಕರ್ಯಗಳನ್ನು ಸರಿಪಡಿಸುವ ಕುರಿತು ಅಧಿಕಾರಿಗಳು, ಇಂಜನಿಯರ್‌ಗಳು ಈ ಬಗ್ಗೆ ಸಮಗ್ರ ವರದಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಬೇಕು. ನಂತರ ಅನುದಾನ ಮಂಜೂರಾತಿಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಇದೇ ವೇಳೆ ಸ್ಥಳದಲ್ಲಿದ್ದ ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಹಿಟ್ನಾಳ್ ಮಾತನಾಡಿ, 15ನೇ ಹಣಕಾಸು ಯೋಜನೆಯಡಿ ನ್ಯಾಮತಿ ತಾಲೂಕಿಗೆ ಈಗಾಗಲೇ 1.65 ಕೋಟಿ ಅನುದಾನ ಮಂಜೂರಾಗಿದೆ. ಇದರಲ್ಲಿ ಅಗತ್ಯ ಕೆಲಸ ಮಾಡಲಾಗುವುದು ಎಂದರು.
ಇದೀಗ ಯರಗನಾಳ್ ಗ್ರಾಮದ ಕೆರೆ ಕೋಡಿ ಬಿದ್ದು ಸಾಕಷ್ಟು ತೊಂದರೆಯಾಗಿದ್ದು, ಮುಂದಿನ ದಿನಗಳಲ್ಲಿ ಹೀಗಾಗದಂತೆ ತಡೆಯಲು ಕೆರೆ ಕೆಳಭಾಗದಲ್ಲಿ ಅಂದಾಜು 35 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಜತೆಗೆ ರಸ್ತೆ, ಚರಂಡಿ, ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹೊನ್ನಾಳಿ ಉಪವಿಭಾಗಾಧಿಕಾರಿ ವಿ. ಅಭಿಷೇಕ, ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ತಾಪಂ ಇಒ ರಾಘವೇಂದ್ರ, ಗ್ರಾಪಂ ಅಧ್ಯಕ್ಷೆ ಸವಿತಾ, ಪಿಡಿಒ ಮಂಜುನಾಥ್, ಪ್ರದೀಪ್ ಇತರರಿದ್ದರು.