ನ್ಯಾಮತಿಯಲ್ಲಿ ವಿಶಿಷ್ಟ ಬನ್ನಿ ಉತ್ಸವ: ದೊಡ್ಡುಕಲ್ಲು ಬೆಟ್ಟವೇರಿದ ಉತ್ಸವ ಮೂರ್ತಿಗಳು; ಸಾವಿರಾರು ಭಕ್ತರ ಭಾಗಿ

nmt
Published on
ನ್ಯಾಮತಿ: ನ್ಯಾಮತಿ ತಾಲೂಕಿನ ಮಾದನಬಾವಿ ಗ್ರಾಮದ ದೊಡ್ಡುಕಲ್ಲು ಕಟ್ಟೆಯಲ್ಲಿ, ದಸರಾ ಪ್ರಯುಕ್ತ ನಡೆದ ಶ್ರೀಗವಿಸಿದ್ದೇಶ್ವರ ಸ್ವಾಮಿ ಮತ್ತು ಶ್ರೀಬೀರಲಿಂಗೇಶ್ವರ ಸ್ವಾಮಿ ದೇವರುಗಳ ಬನ್ನಿ ಉತ್ಸವ ಶನಿವಾರ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಈ ದಸರಾ ಉತ್ಸವವು ತನ್ನ ವಿಶಿಷ್ಟ ಆಚರಣೆಗಳಿಂದ ಗಮನ ಸೆಳೆಯಿತು. 18 ಹಳ್ಳಿಗಳ ಕಟ್ಟೆಮನೆ ಕ್ಷೇತ್ರಕ್ಕೆ ಸೇರಿದ ದೊಡ್ಡುಕಲ್ಲು ಕಟ್ಟೆಯ ಶ್ರೀಗವಿಸಿದ್ದೇಶ್ವರ ಸ್ವಾಮಿಯ ಪೂಜೆಯ ಬಳಿಕ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಬೆಟ್ಟ ಏರಿದ ದೇವಾನುದೇವತೆಗಳು: ಹಿಮ್ಮುಖ ಚಲನೆ ವಿಶೇಷ

ಈ ಉತ್ಸವದ ಅತ್ಯಂತ ವಿಶಿಷ್ಟ ಪದ್ಧತಿ ಎಂದರೆ, ಸುಮಾರು 35 ಅಡಿ ಎತ್ತರದ ದೊಡ್ಡುಕಲ್ಲು ಕಟ್ಟೆಯ ಬೆಟ್ಟವನ್ನು ಉತ್ಸವ ಮೂರ್ತಿಗಳು ಏರುವುದು.

  • ಮುಮ್ಮುಖ ಚಲನೆ: ಅಲಂಕೃತಗೊಂಡ ಪಲ್ಲಕ್ಕಿಗಳಲ್ಲಿ ಬೆನಕನಹಳ್ಳಿ, ಹರಳಹಳ್ಳಿ ಮತ್ತು ಮಾದನಬಾವಿ ಗ್ರಾಮಗಳ ಶ್ರೀಬೀರಲಿಂಗೇಶ್ವರ ಸ್ವಾಮಿಯ ಉತ್ಸವ ಮೂರ್ತಿಗಳು ಮತ್ತು ಮಾದನಬಾವಿ ಗ್ರಾಮದ ಶ್ರೀಮುರಡೇಶ್ವರ ಸ್ವಾಮಿ ದೇವರುಗಳು ಬೆಟ್ಟವನ್ನು ಮುಮ್ಮುಖವಾಗಿ ಏರಿದವು.
  • ಹಿಮ್ಮುಖ ಚಲನೆ: ಇದೇ ವೇಳೆ, ಅಣಜಿ ಗ್ರಾಮದ ಶ್ರೀಬೀರಲಿಂಗೇಶ್ವರ ಸ್ವಾಮಿಯ ಉತ್ಸವ ಮೂರ್ತಿಯ ಅಲಂಕೃತ ಪಲ್ಲಕ್ಕಿಯು ಬೆಟ್ಟವನ್ನು ಹಿಮ್ಮುಖವಾಗಿ ಏರಿ, ಆಚರಣೆಗೆ ಮತ್ತಷ್ಟು ಮೆರಗು ನೀಡಿತು.

ಜಾನಪದ ಸೊಬಗು, ಅಂಬು ಹೊಡೆಯುವ ಆಚರಣೆ

ಬನ್ನಿ ಉತ್ಸವದ ಅಂಗವಾಗಿ ಮಾದನಬಾವಿ ಗ್ರಾಮದ ಬೀದಿಗಳಲ್ಲಿ ಡೊಳ್ಳು, ಭಜನೆ, ಕಹಳೆ ಮತ್ತು ಮಂಗಳ ವಾದ್ಯಗಳೊAದಿಗೆ ಅದ್ಧೂರಿ ಮೆರವಣಿಗೆ ನಡೆಯಿತು. ಈ ಮೆರವಣಿಗೆಯಲ್ಲಿ ಶ್ರೀವೀರಭದ್ರೇಶ್ವರ, ಶ್ರೀರಂಗನಾಥ, ಶ್ರೀಗವಿಸಿದ್ದೇಶ್ವರ, ಶ್ರೀಬೀರಲಿಂಗೇಶ್ವರ ಸ್ವಾಮಿ ಮತ್ತು ಇತರ ಗ್ರಾಮದ ದೇವರುಗಳ ಉತ್ಸವ ಮೂರ್ತಿಗಳನ್ನು ಹೊತ್ತ ಪಲ್ಲಕ್ಕಿಗಳು ಸಾಗಿದವು.

ಬೆಳಿಗ್ಗೆ 5 ಗಂಟೆಗೆ ಬನ್ನಿ ವೃಕ್ಷಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ನಂತರ ದೇವರ ಗಣಮಗ ಅಂಬು ಹೊಡೆಯುವ ಮೂಲಕ ಬನ್ನಿ ಮುಡಿಯುವ ಆಚರಣೆಯನ್ನು ಪೂರ್ಣಗೊಳಿಸಲಾಯಿತು. ಜಾನಪದ ತಂಡಗಳ ನೃತ್ಯ ಪ್ರದರ್ಶನಗಳು ಉತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದವು.

ಈ ದಸರಾ ಬನ್ನಿ ಉತ್ಸವದಲ್ಲಿ ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳು ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಭಕ್ತರು ಮುಂಜಾನೆಯ ಚಳಿ ಮತ್ತು ಇಬ್ಬನಿ ಲೆಕ್ಕಿಸದೆ ಭಾಗವಹಿಸಿ, ದೇವರುಗಳ ದರ್ಶನಾಶೀರ್ವಾದ ಪಡೆದರು. ಈ ಕಾರ್ಯಕ್ರಮವನ್ನು ಶ್ರೀಗವಿಸಿದ್ದೇಶ್ವರ ಸ್ವಾಮಿ ಸೇವಾ ಟ್ರಸ್ಟ್ ಮತ್ತು ಶ್ರೀಬೀರಲಿಂಗೇಶ್ವರ ಸ್ವಾಮಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಯಶಸ್ವಿಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net