ಸಾವಿರ ಚಾಲಕ ನಿರ್ವಾಹಕರ ನೇಮಕ ಶೀಘ್ರ,  ವಾಯುವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಕಾಗೆ ಹೇಳಿಕೆ

IMG_20251006_211244_552.jpg
Published on

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಒಂದು ಸಾವಿರ ಚಾಲಕರು, ನಿರ್ವಾಹಕರ ನೇಮಕಕ್ಕೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅತ್ಯಂತ ಶ್ರೀಘ್ರದಲ್ಲಿಯೇ ಅನುಮತಿ ನೀಡುವ ವಿಶ್ವಾಸವಿದೆ ಎಂದು ಸಂಸ್ಥೆಯ ಅಧ್ಯಕ್ಷ ರಾಜು ಕಾಗೆ ಹೇಳಿದರು.

ನಗರದ ಕೇಂದ್ರ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2019ರ ಅಧಿಸೂಚನೆಯಂತೆ ಚಾಲಕ, ಚಾಲಕ ಕಂ ನಿರ್ವಾಹಕ ಸೇರಿ 2814 ಹುದ್ದೆಗಳ ಭರ್ತಿ ಆಗಬೇಕಿತ್ತು. ಕರೊನಾ ಸಾಂಕ್ರಾಮಿಕದಿಂದ ಈ ಪ್ರಕ್ರಿಯೆ ವಿಳಂಬವಾಯಿತು. ಸಾವಿರ ಹುದ್ದೆಗೆ ಮಾತ್ರ ಸರ್ಕಾರ ಅಂದು ಅನುಮತಿ ನೀಡಿತ್ತು. ಹಾಗಾಗಿ ಮತ್ತೆ ನೇಮಕಕ್ಕೆ ಮನವಿ ಮಾಡಲಾಗಿದೆ ಎಂದರು.

ಹೊಸದಾಗಿ 700 ಬಸ್‌ಗಳನ್ನು ಖರೀದಿ ಮಾಡಲು ಉದ್ದೇಶಿಸಲಾಗಿದೆ. ಟೆಂಡರ್ ಪ್ರಕ್ರಿಯೆ ನಡೆದಿದ್ದು, ಶೀಘ್ರ 300 ಬಸ್ ಖರೀದಿಯಾಗಲಿವೆ. ಈಗಿರುವ ಬಸ್‌ಗಳು ಪ್ರತಿ ದಿನ 16 ಲಕ್ಷಕ್ಕೂ ಹೆಚ್ಚು ಕಿ.ಮೀ. ಓಡುತ್ತವೆ ಎಂದರು.

ಇಲ್ಲಿಯ ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣ ಪುನರ್ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ. ಶ್ರೀಘ್ರ ಲೋಕಾರ್ಪಣೆ ಮಾಡಲಾಗುವುದು. ವಿವಿಧ ಜಿಲ್ಲೆಗಳಲ್ಲಿರುವ ಸಂಸ್ಥೆಯ ವರ್ಕ್‌ಶಾಪ್‌ಗಳ ಕಟ್ಟಡಗಳು ಹಳೆಯವಾಗಿವೆ. ಚಿಕ್ಕೋಡಿಯಲ್ಲಿ ಬ್ರಿಟಿಷ್ ಕಾಲದ ಕಟ್ಟಡ ಇದೆ. ಅಂಥವುಗಳನ್ನು ನೆಲಸಮ ಮಾಡಿ ಹೊಸದಾಗಿ ನಿರ್ಮಿಸುವ ಉದ್ದೇಶ ಇದೆ ಎಂದರು.

ಶಕ್ತಿ ಯೋಜನೆಯಿಂದ ಸಂಸ್ಥೆಗೆ ಬರುವ ಆದಾಯದಲ್ಲಿ ಏರಿಕೆಯಾಗಿದೆ. ಪ್ರತಿ ತಿಂಗಳು ನೌಕರರ ವೇತನವನ್ನು ಐದನೇ ತಾರೀಖಿನ ಒಳಗೆ ನೀಡಲಾಗುತ್ತಿದೆ. ಶಕ್ತಿ ಯೋಜನೆಯ 860 ಕೋಟಿ ರೂ. ಅನುದಾನ ಬಾಕಿ ಇದೆ. ಅದನ್ನು ಸರ್ಕಾರ ಬಿಡುಗಡೆ ಮಾಡಿದರೆ ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಬಹುದು ಎಂದರು.

ಬಸ್ ನಿಲ್ದಾಣಗಳಲ್ಲಿ ಡಾಂಬರ್ ರಸ್ತೆಗಳಿವೆ. ಮಳೆಯಿಂದ ಕಿತ್ತು ಹೋಗಿ ತೊಂದರೆ ಆಗುತ್ತಿದೆ. ಹಾಗಾಗಿ ಎಲ್ಲ ನಿಲ್ದಾಣ, ಡಿಪೋಗಳಲ್ಲಿ ಸಿಸಿ ರಸ್ತೆ ನಿರ್ಮಿಸಲು ಆದ್ಯತೆ ನೀಡಲಾಗುವುದು. ಇದಕ್ಕಾಗಿ 20 ಕೋಟಿ ರೂ. ಟೆಂಡರ್ ಕರೆಯಲಾಗಿದೆ ಎಂದರು.

ನಿಲ್ದಾಣಗಳಲ್ಲಿ 300 ಮಳಿಗೆಗಳನ್ನು ನಿರ್ಮಿಸಲಾಗಿದೆ. 242 ಮಳಿಗೆಗಳು ಖಾಲಿ ಇವೆ. ಅವುಗಳನ್ನು ಶ್ರೀಘ್ರ ಹಂಚಿಕೆ ಮಾಡಿ ಸಂಸ್ಥೆಯ ಆರ್ಥಿಕ ಸಂಪನ್ಮೂಲ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಉಪಾಧ್ಯಕ್ಷರಿಂದ ಅಧಿಕಾರ ಸ್ವೀಕಾರ:
ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾಗಿ ಬೆಳಗಾವಿಯ ಸುನೀಲ ಹನಮಣ್ಣವರ ಸೋಮವಾರ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಸ್ಥೆಯ ಬಗ್ಗೆ ಸಮಗ್ರವಾಗಿ ತಿಳಿದುಕೊಂಡು, ಅಧ್ಯಕ್ಷರೊಂದಿಗೆ ಸೇರಿ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಸಕ್ರಿಯವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಸಚಿವ ಸತೀಶ ಜಾರಕಿಹೊಳಿ, ಸಂಸ್ಥೆಯ ಅಧ್ಯಕ್ಷ ಭರಮಗೌಡ ಕಾಗೆ ಹಾಗೂ ಇತರರು ಸುನೀಲ ಹನಮಣ್ಣವರ ಅವರನ್ನು ಅಭಿನಂದಿಸಿದರು.

ಮಾಜಿ ಸಭಾಪತಿ ವೀರಣ್ಣ ಮತ್ತಿಗಟ್ಟಿ, ಶಾಸಕರಾದ ಎನ್.ಎಚ್. ಕೋನರಡ್ಡಿ, ಯಾಸೀರಖಾನ ಪಠಾಣ, ಹೆಸ್ಕಾಂ ಅಧ್ಯಕ್ಷ ಅಜೀಂಪೀರ ಖಾದ್ರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ತಾಫಹುಸೇನ ಹಳ್ಳೂರ, ಅನಿಲಕುಮಾರ ಪಾಟೀಲ್, ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಪ್ರಧಾನ ಕಾರ್ಯದರ್ಶಿ ನವೀದ್ ಮುಲ್ಲಾ, ಸಂಗಮೇಶ ಗೌರಕ್ಕನವರ, ಪ್ರೇಮನಾಥ ಚಿಕ್ಕತುಂಬಳ, ನಾಗರಾಜ ಗೌರಿ, ರವಿ ಬಡ್ನಿ, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net