

ಹುಬ್ಬಳ್ಳಿ: ಇಲ್ಲಿಯ ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ಚಾಲಕ ಹಾಗೂ ಚಾಲಕ ಕಮ್ ನಿರ್ವಾಹಕ ಸೇರಿ 1814 ಹುದ್ದೆಗಳ ಭರ್ತಿಗೆ ಆಗ್ರಹಿಸಿ ಇಲ್ಲಿಯ ಕೇಂದ್ರ ಕಚೇರಿ ಎದುರು ಆಕಾಂಕ್ಷಿಗಳು ನಡೆಸುತ್ತಿದ್ದ ಪ್ರತಿಭಟನೆಯನ್ನು ಸಚಿವರ ಭರವಸೆ ಹಿನ್ನೆಲೆಯಲ್ಲಿ ಶುಕ್ರವಾರ ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿದೆ.
ಇಲ್ಲಿಯ ಗೋಕುಲ ರಸ್ತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ ಎದುರು ಎರಡು ದಿನಗಳಿಂದ ಪ್ರತಿಭಟನೆ ನಡೆಸಲಾಗುತ್ತಿದ್ದು, ಶುಕ್ರವಾರ ಬೆಳಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಧರಣಿ ಸ್ಥಳಕ್ಕೆ ಆಗಮಿಸಿ ಅಹವಾಲು ಆಲಿಸಿದರು. ಒಂದು ಸಾವಿರ ಹುದ್ದೆ ಭರ್ತಿ ಮಾಡುವ ಭರವಸೆ ನೀಡಿದರು. ಆದರೆ, ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಹೋರಾಟ ಮುಂದುವರಿಸಿದರು.
ಹೊಸ ಬಸ್ ನಿಲ್ದಾಣ ಉದ್ಘಾಟನೆ ಸಮಾರಂಭದ ನಂತರ ಮತ್ತೆ ಮುಖಂಡರೊಂದಿಗೆ ಮಾತುಕತೆ ನಡೆಸುವುದಾಗಿ ಸಚಿವರು ಹೇಳಿದರು. ಅದರಂತೆ ಮಧ್ಯಾಹ್ನ ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ಹೋರಾಟ ನಿರತ ನೌಕರ ಮುಖಂಡರೊಂದಿಗೆ ಸಚಿವರು ಸಭೆ ನಡೆಸಿದರು.
ಈ ವೇಳೆ ಡಿಸೆಂಬರ್ 8 ರೊಳಗೆ ಸುಮಾರು ಒಂದು ಸಾವಿರ ಹುದ್ದೆ ಭರ್ತಿ ಮಾಡಲಾಗುವುದು. ನಂತರದಲ್ಲಿ ಉಳಿದ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಉಳಿದ 814 ಹುದ್ದೆ ಭರ್ತಿಗೆ ಹಣಕಾಸು ಇಲಾಖೆ ಅನುಮೋದನೆ ಬೇಕು. ಇದಕ್ಕಾಗಿ ಪ್ರಯತ್ನಿಸಲಾಗುವುದು ಎಂದು ಸಚಿವರು ತಿಳಿಸಿದರು. ಇನ್ನೊಂದು ತಿಂಗಳು ಕಾಯಲು ಹೋರಾಟ ನಿರತ ಆಕಾಂಕ್ಷಿಗಳು ಒಪ್ಪಿದರು. ಅಷ್ಟರಲ್ಲಿ ಪ್ರಕ್ರಿಯೆ ನಡೆಯಬೇಕು ಎಂದು ಗಡುವು ಸಹ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ಹಣಕಾಸು ಇಲಾಖೆಯೊಂದಿಗೆ ಮಾತುಕತೆ ನಡೆಸಿ ಎಲ್ಲ 1814 ಹುದ್ದೆ ಒಟ್ಟಿಗೆ ಭರ್ತಿಗೆ ಪ್ರಯತ್ನಿಸಲಾಗುವುದು, ಇಲ್ಲವೇ ಮೊದಲ ಹಂತದಲ್ಲಿ ಸಾವಿರ ನಂತರದಲ್ಲಿ ಉಳಿದ ಹುದ್ದೆ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಚಿವರ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ಹೋರಾಟದ ನೇತೃತ್ವ ವಹಿಸಿದ್ದ ಸುಭಾಸಸಿಂಗ್ ಜಮಾದಾರ ತಿಳಿಸಿದ್ದಾರೆ.