ಗುಣಮಟ್ಟಕ್ಕೆ ಕತ್ತರಿ, ಬೆಳೆಗಾರರ ಕಿಡಿ

171
Published on

ಚನ್ನಗಿರಿ: ಸಾಮಾನ್ಯ ರೈತರು ಮಾರಾಟಕ್ಕೆ ತಂದ ಗುಣಮಟ್ಟದ ಅಡಕೆ ತಿರಸ್ಕರಿಸಿ, ಸಂಸ್ಥೆಯ ನಿರ್ದೇಶಕರ ಉತ್ತಮವಲ್ಲದ ಅಡಕೆಯನ್ನು ಪಾಸ್ ಮಾಡಿ ಟೆಂಡರ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಅಡಕೆ ಬೆಳೆಗಾರರು ಮಂಗಳವಾರ ಚನ್ನಗಿರಿ ತುಮ್‌ಕೋಸ್ ಸಂಸ್ಥೆ ಎದುರು ಪ್ರತಿಭಟನೆ ನಡೆಸಿದರು.

ಮಧ್ಯಾಹ್ನ ಶುರುವಾದ ಪ್ರತಿಭಟನೆ ಸಂಜೆಯವರೆಗೂ ಮುಂದುವರಿದಿತ್ತು. ತುಮ್‌ಕೋಸ್ ನಿರ್ದೇಶಕ ಮತ್ತು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಇಬ್ಬರೂ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದ ರೈತರು ಸ್ಥಳಕ್ಕೆ ಸಂಸ್ಥೆ ಅಧ್ಯಕ್ಷರು ಬಾರಲು ಒಪ್ಪದಿದ್ದಕ್ಕೆ ಅವರ ವಿರುದ್ಧವೂ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಸ್ಥಳಕ್ಕೆ ಸಂಸ್ಥೆ ನಿರ್ದೇಶಕ ಚಂದ್ರಶೇಖರ್ ಬನ್ನಿಹಟ್ಟಿ ಬರುತ್ತಿದ್ದಂತೆ ಅವರತ್ತ ನುಗ್ಗಲು ರೈತರು ಮುಂದಾದರು. ಪೊಲೀಸರು ಮಧ್ಯ ಪ್ರವೇಶಿಸಿದ್ದು ಚಂದ್ರಶೇಖರ್ ಅವರನ್ನು ಸಂಸ್ಥೆಯ ಕೊಠಡಿಯೊಂದರಲ್ಲಿ ಇರಿಸಿದರು. ವ್ಯವಸ್ಥಾಪಕ ನಿರ್ದೇಶಕರನ್ನು ರೈತರು ನಿರಂತರ ಪ್ರಶ್ನಿಸಿದರು. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಏನಿದು ಘಟನೆ?

ಪಾಂಡೋಮಟ್ಟಿ ಗ್ರಾಮದ ದ್ಯಾಮಪ್ಪ ಎಂಬುವರು 150 ಕೆಜಿ ಬೆಟ್ಟೆ ಅಡಕೆಯನ್ನು ಮಂಗಳವಾರ ಬೆಳಗ್ಗೆ ಟೆಂಡರ್‌ಗಾಗಿ ತಂದಿದ್ದರು. ಅಡಕೆ ಉತ್ತಮ ಗುಣಮಟ್ಟದಿದ್ದರೂ ತುಮ್‌ಕೋಸ್ ಅಧಿಕಾರಿಗಳು ಗುಣಮಟ್ಟ ಸರಿಯಿಲ್ಲ ಎಂದು ತಿರಸ್ಕರಿಸಿದ್ದಾರೆ. ಕಗತೂರು ರಾಜಣ್ಣ ಎಂಬುವರು 200 ಕೆಜಿ ಬೆಟ್ಟೆ ಕೂಡ ತಿರಸ್ಕರಿಸಲಾಯಿತು ಎನ್ನಲಾಗಿದೆ.

ಅದೇ ವೇಳೆ ಸಂಸ್ಥೆ ನಿರ್ದೇಶಕರಿಗೆ ಸೇರಿದ 60 ಚೀಲ ಬೆಟ್ಟೆ ಅಡಕೆಯನ್ನು ಪರೀಕ್ಷೆ ಮಾಡದೆ ಟೆಂಡರ್‌ಗೆ ಕಳುಹಿಸಿದ್ದರಿಂದ ರೈತರು ಸಿಟ್ಟಿಗೆದ್ದು ಪ್ರತಿಭಟನೆ ಮಾಡುತ್ತಿರುವುದಾಗಿ ಅಡಕೆ ಬೆಳೆಗಾರ ಹೊನ್ನೇಬಾಗಿ ದೇವಣ್ಣ ಹೇಳಿದರು.

ಸಣ್ಣ ಬೆಳೆಗಾರರು ತರುವ ಅಡಕೆಯನ್ನು ಸಂಸ್ಥೆಯವರು ಕಳೆದ ಮೂರು ವರ್ಷದಿಂದಲೂ ಮುಲಾಜಿಲ್ಲದೆ ತಿರಸ್ಕರಿಸಿ ಹೊರಗೆ ಕಳುಹಿಸುತ್ತಿದ್ದಾರೆ. ನಿರ್ದೇಶಕ ಹಾಗೂ ಅವರ ಸಂಬಂಧಿಗಳ ಅಡಕೆ ಹೇಗಿದ್ದರೂ ಖರೀದಿಸುವ ಧೋರಣೆಯಿಂದಾಗಿ ನೈಜ ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿಕೊಂಡರು.

ದೇಶ ಮತ್ತು ರಾಜ್ಯದಲ್ಲಿ ಉತ್ತಮ ಹೆಸರು ಮಾಡಿರುವ ಸಂಸ್ಥೆಯಲ್ಲಿ ಅಡಕೆ ಬೆಳೆಗಾರರಿಗೆ ನ್ಯಾಯ ಸಿಗುತ್ತಿಲ್ಲ. ಆಡಳಿತ ಮಂಡಳಿಯವರಿಂದಾಗಿ ಸಣ್ಣ ಬೆಳೆಗಾರರು ಸಂಸ್ಥೆಗೆ ಅಡಕೆ ಮಾರಾಟ ಮಾಡಲು ಬರುವ ಹಾಗಿಲ್ಲ. ಕಣ್ಣೆದುರು ನಡೆದಿರುವ ಅನ್ಯಾಯವನ್ನು ಅಧಿಕಾರಿಗಳ ಸಮ್ಮುಖದಲ್ಲಿ ಹಿಡಿದು ತೋರಿಸಿದರೂ ಕ್ರಮ ತೆಗೆದುಕೊಳ್ಳದೆ ಹಾರಿಕೆ ಉತ್ತರ ನೀಡುತ್ತಾರೆ ಎಂದು ರೈತರು ದೂರಿದರು.

ಅಡಕೆ ಬೆಳೆಗಾರರಾದ ಗುಳ್ಳೆಳ್ಳಿ ಎಚ್.ಎಸ್. ಮಲ್ಲಿಕಾರ್ಜುನ್, ಎಸ್.ಬಿ. ರವಿಕುಮಾರ್, ಜೆ.ಸಿ. ರವಿ, ಶಶಿಧರ ಬಿಲ್ಲಹಳ್ಳಿ, ಹನುಮಂತಪ್ಪ ತಿಪ್ಪಗೊಂಡನಹಳ್ಳಿ, ರವಿ ಮುದ್ದೇನಹಳ್ಳಿ, ಕಗತೂರು ರಾಜಣ್ಣ, ಬುಳಸಾಗರ ಆನಂದಪ್ಪ ಇತರರಿದ್ದರು.

20 ವರ್ಷದಿಂದ ಅಡಕೆ ಬೆಳೆಯುತ್ತಿದ್ದೇನೆ. ವ್ಯಾಪಾರಿಯಾಗಿ ಅಡಕೆ ಮಾರಾಟಕ್ಕೆ ಬಿಟ್ಟಿದ್ದು, ಯಾವ ಶಿಫಾರಸೂ ಮಾಡಿಲ್ಲ. ಕಳಪೆ ಅಡಕೆ ಎಂದು ಸಾಬೀತಾದರೆ ತಿರಸ್ಕರಿಸುವ ಹಕ್ಕು ಸಂಸ್ಥೆಗೆ ಇರುತ್ತದೆ. ಇದರಲ್ಲಿ ನನ್ನ ಪಾತ್ರವಿಲ್ಲ. ಚಂದ್ರಶೇಖರ್ ಬನ್ನಿಹಟ್ಟಿ, ಸಂಸ್ಥೆ ನಿರ್ದೇಶಕ ಸಂಸ್ಥೆಯು ಯಾವುದೇ ಅಡಕೆ ಬಂದರೂ ಗುಣಮಟ್ಟ ಪರೀಕ್ಷಿಸದೆ ಟೆಂಡರ್‌ಗೆ ಕಳುಹಿಸುವುದಿಲ್ಲ. ಅದರ ನಂತರದಲ್ಲಿ ಕ್ಯಾಂಪ್ಕೋ ಸಂಸ್ಥೆ ಪರಿಶೀಲಿಸುತ್ತದೆ. ಬೆಳೆಗಾರರಿಗೆ ಅನ್ಯಾಯವಾಗಲು ಆಡಳಿತ ಮಂಡಳಿ ಬಿಡುವುದಿಲ್ಲ. ಆರ್.ಎಂ. ರವಿ, ಅಧ್ಯಕ್ಷ, ತುಮ್‌ಕೋಸ್ ಸಂಸ್ಥೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net