

ಎನ್.ಆರ್.ಪುರ: ಅಡಕೆ ಅರಣ್ಯ ಉತ್ಪನ್ನ ಎಂದು ಕೇಂದ್ರ ಸರ್ಕಾರದ ಗೆಜೆಟ್ ನೋಟಿಫಿಕೇಷನ್‌ನಲ್ಲಿ ಪ್ರಕಟವಾಗಿದ್ದು ,ಇದನ್ನು ಗೆಜೆಟ್‌ನಿಂದ ತೆಗೆಯಬೇಕು ಎಂದು ಅಡಕೆ ಮಾರಾಟ ಸಹಕಾರ ಸಂಘಗಳು ಕೇಂದ್ರ ಸಚಿವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆದೇಶವನ್ನು ಕೈ ಬಿಟ್ಟಿದೆ ಎಂದು ರಾಜ್ಯ ಅಡಕೆ ಸಹಕಾರ ಸಂಘಗಳ ಸಹಕಾರ ಮಹಾ ಮಂಡಳ ಅಧ್ಯಕ್ಷ ಯಡೆಗೆರೆ ಸುಬ್ರಹ್ಮಣ್ಯ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಮಾರ್ಚ್ 24ರಂದು ಅರಣ್ಯಉತ್ಪನ್ನ ಅಡಿ ಅಡಕೆ ಸೇರಿಸಿರುವುದನ್ನು ವಿರೋಧಿಸಿ ಅಡಕೆ ಮಹಾ ಮಂಡಳ ಹಾಗೂ ಇತರ ಅಡಕೆ ಮಾರಾಟ ಸಹಕಾರ ಸಂಘಗಳ ಪ್ರತಿನಿಧಿಗಳು ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜೂ. 26 ರಂದು ಅರಣ್ಯಉತ್ಪನ್ನದಲ್ಲಿ ಅಡಕೆಯನ್ನು ತೆಗೆದು ನೂತನ ಗೆಜೆಟ್ ಪ್ರಕಟಣೆ ಹೊರಡಿಸಿದೆ.
ಅಡಕೆ ಬೆಳೆಗಾರರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ವಿದೇಶದಿಂದ 17 ಸಾವಿರಟನ್ ಹಸಿ ಅಡಕೆ ಆಮದಾಗುವುದರಿಂದ ಮಾರುಕಟ್ಟೆ ಧಾರಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈಗಾಗಲೇ ಕೆಲವು ಭಾಗದಲ್ಲಿ ಅಡಕೆ ಕೊಯ್ಲು ಪ್ರಾರಂಭವಾಗಿದ್ದು, ಉತ್ತಮ ಗುಣಮಟ್ಟದ ಅಡಕೆ ತಯಾರಿಸುವ ನಿಟ್ಟಿನಲ್ಲಿ ಬೆಳೆಗಾರರು ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ.