

ಎನ್.ಆರ್.ಪುರ: ತಾಲೂಕಿನ ಮುತ್ತಿನಕೊಪ್ಪ ಗ್ರಾಪಂ ವ್ಯಾಪ್ತಿಯ ಹೊಸಕೊಪ್ಪ, ಕುಸುಬೂರು, ಸಾತ್ಕೋಳಿ, ಹಿರೇಗದ್ದೆ, ಕುಸಬೂರು ಕಾಲನಿಗಳಲ್ಲಿ ಒಂದು ವಾರದಿಂದ ಒಂಟಿ ಸಲಗದ ಕಾಟ ಹೆಚ್ಚಾಗಿದ್ದು ಅಡಕೆ, ಬಾಳೆ ನಾಶ ಮಾಡುತ್ತಿದೆ.
ಹೊಸಕೊಪ್ಪ ಸಮೀಪದ ತೋಟದ ಪಕ್ಕದ ಕೆರೆಗೆ ಬುಧವಾರ ಮಧ್ಯಾಹ್ನ ಒಂಟಿ ಸಲಗ ಬಂದು ನೀರು ಕುಡಿದು ಸುತ್ತಾಡಿಕೊಂಡು ಹೋಗಿದೆ. ಹಗಲು ಹೊತ್ತಿನಲ್ಲಿ ಕಾಡು ಸೇರುವ ಈ ಒಂಟಿ ಸಲಗ ರಾತ್ರಿ ಹೊತ್ತಿನಲ್ಲಿ ಗ್ರಾಮಗಳಿಗೆ ಬಂದು ಅಡಕೆ, ಬಾಳೆ ಗಿಡ ನಾಶಪಡಿಸುತ್ತಿದೆ. ಕಾಡು ಪ್ರಾಣಿ ಹಾವಳಿ ತಡೆಗೆ ರೈತರು ತೋಟದ ಸುತ್ತ ಐಬೆಕ್ಸೃ್ ಬೇಲಿ ಹಾಕಿದ್ದರೂ ಒಂಟಿ ಸಲಗ ಐಬೆಕ್ಸೃ್ ಬೇಲಿಗೆ ಕೇರ್ ಮಾಡದೇ ತಂತಿ ತುಂಡು ಮಾಡಿಕೊಂಡು ತೋಟಕ್ಕೆ ಬರುತ್ತಿದೆ.
ಅರಣ್ಯ ಇಲಾಖೆ ನೀಡಿದ ಪಟಾಕಿಗಳನ್ನು ಸಿಡಿಸಿ ಗ್ರಾಮಸ್ಥರು ಆನೆ ಓಡಿಸುತ್ತಿದ್ದಾರೆ. ಆದರೆ, ಕಾಡಿ ಹೋದ ಆನೆ ಕೆಲವು ಸಮಯದಲ್ಲೇ ಮತ್ತೆ ವಾಪಸು ಬರುತ್ತಿದೆ. ಈ ಒಂಟಿ ಸಲಗದ ಕಾಟದಿಂದ ರೈತರಿಗೆ ತೀವ್ರ ನಷ್ಟ ಉಂಟಾಗುತ್ತಿದ್ದು , ಅರಣ್ಯ ಇಲಾಖೆ ಈ ಒಂಟಿ ಸಲಗವನ್ನು ಲಕ್ಕವಳ್ಳಿಯ ವನ್ಯಜೀವಿ ಅಭಯಾರಣ್ಯಕ್ಕೆ ಓಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.