ಪೌಷ್ಟಿಕ ಆಹಾರ ಕಳಪೆ-ಮಣ್ಣೂರ ಗ್ರಾಮಸ್ಥರ ಆಕ್ರೋಶ

25-SVR-3
Published on

ಸವಣೂರ: ತಾಲೂಕಿನ ಮಣ್ಣೂರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಪೂರೈಸಿರುವ ಪೌಷ್ಟಿಕ ಆಹಾರ ಕಳಪೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಗ್ರಾಮಸ್ಥರು, ಪಾಲಕರು ಆಹಾರ ಪೂರೈಕೆದಾರರನ್ನು ಬುಧವಾರ ತರಾಟೆಗೆ ತೆಗೆದುಕೊಂಡರು.

ಮಕ್ಕಳು ದೈಹಿಕವಾಗಿ ಸದೃಢರಾಗಲು ಸರ್ಕಾರ ನೀಡುವ ಆಹಾರವೇ ಕಳಪೆಯಾದರೆ, ಮಕ್ಕಳ ಆರೋಗ್ಯ ಸುಧಾರಿಸುವುದಿರಲಿ, ಇದ್ದ ಆರೋಗ್ಯ ಹಾಳಾದಲ್ಲಿ ಹೊಣೆಗಾರರು ಯಾರು ಎಂದು ಪಾಲಕರು ಸಿಡಿಪಿಒ ಉಮಾ ಕೆ.ಎಸ್., ಅವರನ್ನು ತರಾಟೆಗೆ ತೆಗೆದುಕೊಂಡರು.

ಸುದ್ದಿ ತಿಳಿದು ಎಂಎಸ್‌ಪಿಸಿ ಅಧ್ಯಕ್ಷೆ ನಿರ್ಮಲಾ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಹೆಸರು ಬೇಳೆ ಮಾತ್ರ ಕಳಪೆಯಾಗಿದ್ದು, ಸರಿ ಪಡಿಸಲಾಗುವುದು ಎಂದು ಸಮಜಾಯಿಸಿ ನೀಡಲು ಮುಂದಾದರು.

ಇದರಿಂದ ಮತ್ತಷ್ಟು ಆಕ್ರೋಶಗೊಂಡ ಗ್ರಾಮಸ್ಥರು, ಕೇಂದ್ರದಲ್ಲಿ ನೀಡುವ ಎಲ್ಲ ಪೌಷ್ಟಿಕ ಆಹಾರ ಕಳಪೆಯಾಗಿದೆ. ಅಧಿಕಾರಿಗಳು ತಾಲೂಕಿನ ಅಂಗನವಾಡಿಗಳಿಗೆ ಪೂರೈಸುವ ಪ್ರತಿ ಆಹಾರವನ್ನು ಪರೀಕ್ಷೆಗೆ ಕಳುಹಿಸಿ ವರದಿ ಆಧಾರದ ಮೇಲೆ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಿಡಿಪಿಒ ಪ್ರತಿಕ್ರಿಯಿಸಿ, ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಗುಣಮಟ್ಟ ಖಚಿತ ಪಡಿಸುವವರೆಗೆ ಆಹಾರವನ್ನು ಮಕ್ಕಳಿಗೆ ನೀಡಬೇಡಿ ಎಂದು ತಾಕೀತು ಮಾಡಿದರು.

ಪ್ರಮುಖರಾದ ನಂದೀಶಗೌಡ ಪಾಟೀಲ, ಈರನಗೌಡ ನಾಗನಗೌಡ್ರ, ಸಿದ್ದಪ್ಪ ಹರಕುಣಿ, ಭರಮಪ್ಪ ಉಳ್ಳಟ್ಟಿ, ಸುರೇಶ ಉಳ್ಳಟ್ಟಿ, ಮಲ್ಲೇಶಪ್ಪ ವಟವಟಿ, ಅಣ್ಣಪ್ಪಗೌಡ ಪಾಟೀಲ, ಮಹೇಶ ವಟವಟಿ, ರಾಜು ಉಳ್ಳಟ್ಟಿ, ಶಂಕರಗೌಡ ಪಾಟೀಲ, ಶಿವಪ್ಪ ಉಳ್ಳಟ್ಟಿ, ವೀರಭದ್ರಗೌಡ ಪಾಟೀಲ, ಸಿದ್ದಪ್ಪ ಗುಡಗೇರಿ, ಈಶ್ವರ ಅಣ್ಣಿಗೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net