ದೈಹಿಕ ಸದೃಢತೆಗೆ ಪೌಷ್ಟಿಕ ಆಹಾರ ಅವಶ್ಯ

FotoJet (1)
Published on

ತಾಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ್​ ಮಾಹಿತಿ 

 ಗುಬ್ಬಿ: ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಪೌಷ್ಟಿಕ ಆಹಾರ ಸೇವಿಸಬೇಕು. ಇದರಿಂದ ರಕ್ತಹಿನತೆ ತಡೆಗಟ್ಟಬಹುದು ಎಂದು ತಾಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ್​ ತಿಳಿಸಿದರು.

ತಾಲೂಕಿನ ದೊಡ್ಡಗುಣಿ ಗ್ರಾಮದ ಶ್ರೀ ಮಲ್ಲಿಕಾದೀಪ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಮಲೇರಿಯಾ ಮಾಸಾಚರಣೆ ಹಾಗೂ ಶಾಲಾ ಮಕ್ಕಳಿಗೆ ರಕ್ತಹಿನತೆ ಪರೀಕ್ಷೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳಲ್ಲಿ ಸುಸ್ತು ಹಾಗೂ ಉಸಿರಾಟದ ತೊಂದರೆ ಕಂಡು ಬಂದರೆ ತಕ್ಷಣ ರಕ್ತಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ವೈದ್ಯರು ರಕ್ತ ಹೀನತೆ ಇರುವುದನ್ನು ದೃಢಪಡಿಸುತ್ತಾರೆ. ರಾಜ್ಯದಲ್ಲಿ ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸದರಿ ಯೋಜನೆಯಡಿಯಲ್ಲಿ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ರಕ್ತಹಿನತೆ ಪರೀಕ್ಷೆ ಮಾಡಲಾಗುತ್ತದೆ. ಆ ಕುರಿತು ಶಾಲೆಯ ಶಿಕ್ಷಕರು ಮತ್ತು ಪಾಲಕರು ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಹುಟ್ಟಿನಿಂದ 18 ವರ್ಷದವರೆಗೆ ಬರುವ ರೋಗಗಳಿಗೆ ಹಲವಾರು ರೀತಿಯ ಲಸಿಕೆಗಳಿದ್ದು, ಪಾಲಕರು ತಪ್ಪದೆ ಮಕ್ಕಳಿಗೆ ಲಸಿಕೆ ಹಾಕಿಸಬೇಕು. ಇದರಿಂದ ಜೀವಿತಾವಧಿಯಲ್ಲಿ ರೋಗನಿರೋಧಕ ಶಕ್ತಿ ನೀಡಿದಂತಾಗುತ್ತದೆ ಎಂದರು. ಅನೀಮಿಯ ಕಾಯಿಲೆ ಕಾಣಿಸಿಕೊಳ್ಳುವುದರಿಂದ ಶಾಲೆಗೆ ಮಕ್ಕಳು ಗೈರಾಗುವುದು, ಆರೋಗ್ಯದಲ್ಲಿ ಏರುಪೇರು ಆಗುವುದು ಕಂಡು ಬರುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತ ಹಾಗೂ ರಾಜ್ಯ ಸರ್ಕಾರ ಅನೀಮಿಯ ಮುಕ್ತ ಭಾರತ ಮಾಡುವ ನಿಟ್ಟಿನಲ್ಲಿ ಈ ಕಾರ್ಯ ಮಾಡುತ್ತಿದೆ ಎಂದರು.

ಮುಖ್ಯ ಶಿಕ್ಷಕ ಸತ್ಯನಾರಾಯಣ್​ ಮಾತನಾಡಿ, ಮಕ್ಕಳು ಶಾಲೆಯಲ್ಲಿ ಆರೋಗ್ಯ ಇಲಾಖೆಯಿಂದ ಪಡೆದಿರುವ ಮಾಹಿತಿಯನ್ನು ತಮ್ಮ ಪಾಲಕರಿಗೆ ತಿಳಿಸುವ ಮೂಲಕ ಮನೆಯ ಅಕ್ಕ&ಪಕ್ಕ ಚರಂಡಿಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಲು ತಿಳಿಸಬೇಕು ಎಂದರು.

ವೈದ್ಯಾಧಿಕಾರಿ ಡಾ.ಕಿರಣ್​, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ತಂಡದ ವೈದ್ಯಾಧಿಕಾರಿ ಡಾ.ವಿನಯ್​, ಕಾವ್ಯಾ, ಆರೋಗ್ಯ ನಿರೀಕ್ಷಣಾಧಿಕಾರಿ ಜಯಣ್ಣ, ರಮೇಶ್​, ಶುಶೂಷಕರಾದ ಶ್ರೀಧರ್​, ಸುಮಿತ್ರಾ, ಕಿರಿಯ ಪ್ರಯೋಗಶಾಲಾ ತಂತ್ರಜ್ಞೆ ಎಚ್​.ರಮ್ಯಾ, ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net