

ಆಲ್ದೂರು: ಗರ್ಭಿಣಿಯರಿಗೆ ಪೌಷ್ಟಿಕ ಆಹಾರದ ಕೊರತೆ ಉಂಟಾಗದಂತೆ ಅನ್ನಪೂರ್ಣ, ಮಾತೃವಂದನಾ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಪೌಷ್ಟಿಕ ಆಹಾರ ಗರ್ಭಿಣಿ, ಮಗುವಿನ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಹಕಾರಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮೇಲ್ವಿಚಾರಕಿ ಶಾರದಾ ಹೇಳಿದರು.
ಆಲ್ದೂರು, ಸತ್ತಿಹಳ್ಳಿ, ದೊಡ್ಡಮಾಗರವಳ್ಳಿ ಗ್ರಾಪಂ ವ್ಯಾಪ್ತಿಯ ಅಂಗನವಾಡಿಗಳ ಸಹಭಾಗಿತ್ವದಲ್ಲಿ ಶುಕ್ರವಾರ ದೊಡ್ಡಮಾಗರವಳ್ಳಿ ಅಂಗನವಾಡಿಯಲ್ಲಿ ಆಯೋಜಿಸಿದ್ದ ಪೌಷ್ಟಿಕ ಆಹಾರ ಮತ್ತ್ತು ಪೋಷಣ್ ಅಭಿಯಾನದಲ್ಲಿ ಮಾತನಾಡಿ, ಯೋಜನೆ ಸೌಲಭ್ಯ ಬಳಸಿಕೊಳ್ಳುವಂತೆ ತಿಳಿಸಿದರು. ಹಿರಿಯ ಆರೋಗ್ಯ ಸಂರಕ್ಷಣಾಧಿಕಾರಿ ನಾಗರತ್ನಾ ಮಾತನಾಡಿ, ಗರ್ಭಿಣಿಯರು ಆಹಾರದಲ್ಲಿ ಸೊಪ್ಪು, ತರಕಾರಿ ಹೆಚ್ಚಾಗಿ ಸೇವನೆ ಮಾಡಬೇಕು. ನಿಗದಿತ ಪ್ರಮಾಣದಲ್ಲಿ ಪೋಷಕಾಂಶಯುಕ್ತ ಆಹಾರ ಸೇವನೆ ಮಾಡಬೇಕು ಎಂದು ಸಲಹೆ ನೀಡಿದರು. ಸಕಾಲದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಚುಚ್ಚುಮದ್ದು, ಖನಿಜಾಂಶ ಹೊಂದಿರುವ ಮಾತ್ರೆಗಳನ್ನು ಸೇವಿಸಬೇಕು ಎಂದು ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ದಿವ್ಯಾ, ರವಿ ಪ್ರಕಾಶ್ ಮಾತನಾಡಿದರು. ಅಂಗನವಾಡಿ ಮಕ್ಕಳಿಗೆ ಏರ್ಪಡಿಸಿದ್ದ ಛದ್ಮವೇಷ ಸ್ಪರ್ಧೆಯಲ್ಲಿ ಮಕ್ಕಳು ವಿವಿಧ ವೇಷಗಳಲ್ಲಿ ಮನ ಸೆಳೆದರು. ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಯಿತು. ಶಾಂಭವಿ, ಶಿವಲೀಲಾ ಅವರಿಗೆ ಸೀಮಂತ ಮಾಡಲಾಯಿತು. ದೊಡ್ಡಮಾಗರವಳ್ಳಿ ಗ್ರಾಪಂ ಅಧ್ಯಕ್ಷೆ ಪದ್ಮಾವತಿ ಸ್ವಾಮಿ, ಉಪಾಧ್ಯಕ್ಷೆ ಮೇಘನಾ, ಸದಸ್ಯೆ ಸುಮಿತ್ರಾ, ಶುಶ್ರೂಷಕಿಯರಾದ ಜ್ಯೋತಿ, ಭಾನುಪ್ರಿಯಾ, ಆಲ್ದೂರು ವಿಎಸ್‌ಎಸ್‌ಎನ್ ನಿರ್ದೇಶಕಿ ಡಿ.ಎಂ. ವಿನೋದಾ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.