

ಸಿಂಧನೂರು: ಯುವತಿಯರು ಪ್ರೌಢಾವಸ್ಥೆಗೆ ಬಂದ ನಂತರ ಆರೋಗ್ಯದ ಕಾಳಜಿ ಹೆಚ್ಚಿಸಿಕೊಳ್ಳುವ ಮೂಲಕ ಪರಿಪೂರ್ಣ ಆರೋಗ್ಯ ಹೊಂದಬೇಕು ಎಂದು ಐಎಂಎ ಮಹಿಳಾ ಘಟಕ ತಾಲೂಕು ಅಧ್ಯಕ್ಷೆ ಡಾ.ಪದ್ಮಾ ಬಿ.ಪಾಟೀಲ್ ಹೇಳಿದರು.
ನಗರದ ಕಸ್ತೂರ ಬಾ ಗಾಂಧಿ ಬಾಲಿಕಾ ವಿದ್ಯಾಲಯ(ಉರ್ದು) ಶಾಲೆಯಲ್ಲಿ ಶನಿವಾರ ಐಎಂಎ ಮಹಿಳಾ ಘಟಕ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿನಿಯರಿಗೆ ಆರೋಗ್ಯ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವತಿಯರು ಇಂದು ಅನೇಕ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಮುಂಜಾಗ್ರತಾ ಕ್ರಮ ವಹಿಸುವುದು ಅತ್ಯಗತ್ಯವಾಗಿದೆ. ವೈದ್ಯರ ಸಲಹೆ, ಮಾರ್ಗದರ್ಶನ ಪಡೆಯದಿದ್ದಲ್ಲಿ ಗಂಭೀರ ಕಾಯಿಲೆಗೆ ತುತ್ತಾಗಬೇಕಾಗುತ್ತದೆ.
ಪ್ರೌಢಾವಸ್ಥೆಯ ನಂತರ ಆಗುವ ಬದಲಾವಣೆ ಬಗ್ಗೆಯೂ ಕಾಳಜಿ ವಹಿಸಬೇಕು. ಪೌಷ್ಟಿಕ ಆಹಾರ, ಸಮಯಕ್ಕೆ ಸರಿಯಾಗಿ ಆಹಾರ ಪಡೆಯುವ ಬಗ್ಗೆಯೂ ಗಮನಹರಿಸಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿನಿಯರ ಪ್ರಶ್ನೆಗಳಿಗೆ ವೈದ್ಯರು ಉತ್ತರಿಸಿದರು.