

ಕುಮಟಾ: ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಸಿಡಿಪಿಒ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ಹೆಗಡೆ ಗ್ರಾಮ ಪಂಚಾಯಿತಿಯ ಅಂಬೇಡ್ಕರ್ ಸಭಾಭವನದಲ್ಲಿ ಪೋಷಣ ಪಕ್ವಾಡ ಕಾರ್ಯಕ್ರಮ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಪಟಗಾರ ಉದ್ಘಾಟಿಸಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಭಾರತಿ ಚಂದ್ರು ಪಟಗಾರ, ಪೋಷಣ ಪಕ್ವಾಡ ಕಾರ್ಯಕ್ರಮದ ಉದ್ದೇಶ, ಪೌಷ್ಟಿಕ ಆಹಾರದ ಮಹತ್ವ, ಚುಚ್ಚುಮದ್ದಿನ ಅವಶ್ಯಕತೆ ಹಾಗೂ ಮಾನಸಿಕ ಆರೋಗ್ಯ ಕಾಪಾಡುವ ಬಗೆಯನ್ನು ವಿವರಿಸಿದರು.
ಮುಖ್ಯ ಅತಿಥಿ ಡಾ. ಪ್ರಕಾಶ, ಗರ್ಭಿಣಿ ಸ್ತ್ರೀಯರಿಗೆ ಬೇಕಾಗುವ ಆಹಾರ, ಪೋಷಕಾಂಶಗಳು ಹಾಗೂ ಗರ್ಭಾವಸ್ಥೆಯಲ್ಲಿ ಆರೋಗ್ಯದ ಸಮತೋಲನವನ್ನು ಕಾಪಾಡಿಕೊಳ್ಳುವ ವಿಧಾನವನ್ನು ತಿಳಿಸಿಕೊಟ್ಟರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ರೇಖಾ ಯಲಿಗಾರ, ಎನ್‌ಎಸ್‌ಎಸ್ ಘಟಕದ ಧ್ಯೇಯ ಹಾಗೂ ಘಟಕದ ವಿದ್ಯಾರ್ಥಿಗಳು ನಿರ್ವಹಿಸಬೇಕಾದ ಕರ್ತವ್ಯ ಕುರಿತು ವಿವರಿಸಿದರು.
ಪಿಡಿಒ ವಿ.ಎ. ಪಟಗಾರ, ಸಮುದಾಯ ಆರೋಗ್ಯ ಅಭಿವೃದ್ಧಿ ಅಧಿಕಾರಿ ಶೀಲಾ ಪಟಗಾರ, ಭಾರತೀಯ ಕುಟುಂಬ ಯೋಜನಾಸಂಘದ ವ್ಯವಸ್ಥಾಪಕಿ ಸಂತಾನ್ ಲೂಯಿಸ್ ಇತರರು ಇದ್ದರು.
ಕಮಲಾ ಬಾಳಿಗಾ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. ಗರ್ಭಿಣಿಯ ಆರೋಗ್ಯ, ನವಜಾತ ಶಿಶುವಿನ ಬೆಳವಣಿಗೆ, ಗರ್ಭಿಣಿಯರು ಸೇವಿಸಬೇಕಾದ ಪೌಷ್ಟಿಕ ಆಹಾರದ ವಿಡಿಯೋ ಪ್ರದರ್ಶಿಸಲಾಯಿತು.