

ಹೊನ್ನಾಳಿ: ಮಕ್ಕಳ ದೈಹಿಕ ಕ್ಷಮತೆ, ಕ್ರಿಯಾಶೀಲತೆಗಾಗಿ ಪೌಷ್ಟಿಕಾಂಶದ ಆಹಾರ ಅಗತ್ಯವಾಗಿ ನೀಡಬೇಕು ಎಂದು ಹೊನ್ನಾಳಿ ಜೆಎಂಎಫ್‌ಸಿ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಪುಣ್ಯಕೋಟಿ ಎಸ್.ಎನ್. ತಿಳಿಸಿದರು.
ತಾಲೂಕಿನ ಹತ್ತೂರು ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾನೂನು ಸೇವಾ ಸಮಿತಿ, ಪೊಲೀಸ್ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪೌಷ್ಟಿಕಾಂಶ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಸಿಡಿಪಿಒ ಜ್ಯೋತಿ ಮಾತನಾಡಿ, ಗರ್ಭಿಣಿಯರಲ್ಲಿ ಹಾಗೂ ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ನಿವಾರಿಸುವ ದೃಷ್ಠಿಯಿಂದ 2018ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಪೋಷಣ್ ಮಿಷನ್ ಪೋಷಣ್ ಅಭಿಯಾನ ಪ್ರಾರಂಭಿಸಿ ಗರ್ಭಿಣಿಯರಿಗೆ, ಮಕ್ಕಳಿಗೆ ಪೌಷ್ಟಿಕಾಂಶದ ಆಹಾರ ನೀಡಲಾಗುತ್ತಿದೆ. ಅದರ ಅಂಗವಾಗಿ ಪ್ರತಿವರ್ಷ ಸೆಪ್ಟಂಬರ್ ತಿಂಗಳಲ್ಲಿ ಪೋಷಣ್ ಅಭಿಯಾನ ಮಾಸಾಚರಣೆ ಜಾಗೃತಿ ಅಭಿಯಾನ ಆಯೋಜಿಸಲಾಗುತ್ತಿದೆ ಎಂದರು.
ಸಹಾಯಕ ಸರ್ಕಾರಿ ಸಹಾಯಕ ಅಭಿಯೋಜಕ ಭರತ್ ಭೀಮಯ್ಯ ಮಾತನಾಡಿ, ಇತ್ತೀಚೆಗೆ ಆಧುನಿಕತೆಗೆ ಮರುಹೋಗಿ ಆಹಾರದಲ್ಲೂ ಆಧುನಿಕತೆ ಹುಡುಕುತ್ತ ಆರೋಗ್ಯದಲ್ಲಿ ಏರುಪೇರು ಮಾಡಿಕೊಳ್ಳುತ್ತಿದ್ದೇವೆ. ಶರೀರ ಸದೃಢವಾಗಿರಬೇಕಾದರೆ ನೈಸರ್ಗಿಕವಾಗಿ ಸಿಗುವ ಸೊಪ್ಪು, ತರಕಾರಿ, ಸತ್ವ ಭರಿತ ಆಹಾರ ಪದಾರ್ಥ ತಿನ್ನಬೇಕು ಎಂದರು.
ವೈದ್ಯಾಧಿಕಾರಿ ಡಾ. ಮಲ್ಲಿಕಾರ್ಜುನ್ ಮಾತನಾಡಿದರು. ಗರ್ಭಿಣಿಯರಿಗೆ ಸೀಮಂತ: ಸಿಡಿಪಿಒ ಇಲಾಖೆ ವತಿಯಿಂದ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಸಲಾಯಿತು. ಸೀಮಂತ ಕಾರ್ಯಕ್ರಮದಲ್ಲಿ ಅರಿಶಿಣ, ಕುಂಕುಮ, ಬಳೆ, ಸೀರೆ ನೀಡಲಾಯಿತು.