

ದೇವದುರ್ಗ: ಗ್ರಾಮೀಣ ಭಾಗದ ಮಹಿಳೆಯರು ಹಾಗೂ ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕ, ಕಡಿಮೆ ತೂಕ ನಿವಾರಣೆಗಾಗಿ ಸರ್ಕಾರ ಪೌಷ್ಟಿಕ ಆಹಾರ ವಿತರಣೆ ಯೋಜನೆ ಜಾರಿಗೊಳಿಸಿದೆ. ಗರ್ಭಿಣಿಯರು, ಬಾಣಂತಿಯರು ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಗಾಲೇರದೊಡ್ಡಿ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ದೊಡ್ಡಪ್ಪ ಹೇಳಿದರು.
ತಾಲೂಕಿನ ಹಳ್ಳದರಾಯನ ದೊಡ್ಡಿ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆೆಯಿಂದ ಆಯೋಜಿಸಿದ್ದ ಪೌಷ್ಟಿಕ ಆಹಾರ ಸಪ್ತಾಹ ಹಾಗೂ ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಪೌಷ್ಟಿಕ ಆಹಾರ ಸೇವನೆಯಿಂದ ಕಡಿಮೆ ತೂಕ ಹಾಗೂ ಅಪೌಷ್ಟಿಕ ದೂರ ಮಾಡಬಹುದು ಎಂದರು.
ಆರೋಗ್ಯ ಇಲಾಖೆ ಅಧಿಕಾರಿ ಗೀತಾ ಮಾತನಾಡಿ, ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಯಾವುದೇ ಕಾಯಿಲೆ ಬಂದರೂ ನಿರ್ಲಕ್ಷ್ಯ ಮಾಡದೆ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗೊಗೇರ್‌ದೊಡ್ಡಿ, ಮಟ್ಲರ್‌ದೊಡ್ಡಿ, ಗುಂಡದೇವರದೊಡ್ಡಿ, ಹಳ್ಳದರಾಯದೊಡ್ಡಿ, ಎಂ.ಕುರ್ಲೇರ್‌ದೊಡ್ಡಿ, ಕಾಳೇರದೊಡ್ಡಿ, ಜಕ್ಲೇರ್‌ದೊಡ್ಡಿ ಅಂಗನವಾಡಿ ಕೇಂದ್ರ ವ್ಯಾಪ್ತಿಯ ಗರ್ಭಿಣಿಯರಿಗೆ ಸೀಮಂತ ಮಾಡಲಾಯಿತು. ವೈದ್ಯಾಧಿಕಾರಿ ಪ್ರವೀಣ್, ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳಾ, ರೇಣುಕಾ, ಲಕ್ಷ್ಮೀ, ಪುಷ್ಪಾ, ಪ್ರಮುಖರಾದ ಹಳ್ಳಪ್ಪ ಮರಡಿ, ಭೀಮಯ್ಯ, ಮಾತಪ್ಪ ಇದ್ದರು.