ರಾಗಿ ಹೆಲ್ತ್ ಮಿಕ್ಸ್‌ನಿಂದ ಮಕ್ಕಳಿಗೆ ಪೌಷ್ಠಿಕಾಂಶ ಲಭ್ಯ

23-02-Shiva-4
ರಾಯಚೂರಿನ ಸ್ಟೇಷನ್ ಬಜಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ರಾಗಿ ಹೆಲ್ತ್ ಮಿಕ್ಸ್ ಮಿಶ್ರಿತ ಹಾಲು ವಿತರಣೆ ಕಾರ್ಯಕ್ರಮದಲ್ಲಿ ಜಿ.ಪಂ. ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ ಮಾತನಾಡಿದರು. ನಗರಸಭೆ ಸದಸ್ಯೆ ಡಿ.ಲಕ್ಷ್ಮಿ, ಡಿಡಿಪಿಐ ಕೆ.ಡಿ.ಬಡಿಗೇರ, ಬಿಇಒ ಚಂದ್ರಶೇಖರ ಭಂಡಾರಿ, ಅಕ್ಷರ ದಾಸೋಹ ಯೋಜನೆ ಜಿಲ್ಲಾ ಅಕಾರಿ ಡಾ.ಈರಣ್ಣ ಕೊಸಗಿ, ಮುಖ್ಯಗುರು ರಾಘವೇಂದ್ರ ಇದ್ದರು.
Published on

ರಾಯಚೂರು: ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ಶಾಲೆಯಲ್ಲಿ ನೀಡಲಾಗುವ ಹಾಲಿನೊಂದಿಗೆ ವಾರದಲ್ಲಿ ಮೂರು ದಿನಗಳ ಕಾಲ ನೀಡಲಾಗುವ ರಾಗಿ ಹೆಲ್ತ್ ಮಿಕ್ಸ್ ಪುಡಿಯಿಂದ ಮಕ್ಕಳಿಗೆ ಪೌಷ್ಠಿಕಾಂಶ ದೊರೆಯಲಿದೆ ಎಂದು ಜಿ.ಪಂ. ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ ಹೇಳಿದರು.
ನಗರದ ಸ್ಟೇಷನ್ ಬಜಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ರಾಗಿ ಹೆಲ್ತ್ ಮಿಕ್ಸ್ ವಿತರಣೆ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ರಾಗಿ ಮಿಕ್ಸ್‌ನಿಂದ ಮಕ್ಕಳಿಗೆ ಪೌಷ್ಠಿಕಾಂಶ ದೊರೆಯುವುದರ ಜತೆಗೆ ಬುದ್ದಿ ಮತ್ತೆಯೂ ಹೆಚ್ಚಳವಾಗಲಿದೆ ಎಂದರು.
ಅಕ್ಷರ ದಾಸೋಹ ಯೋಜನೆ ಜಿಲ್ಲಾ ಅಕಾರಿ ಡಾ.ಈರಣ್ಣ ಕೊಸಗಿ ಮಾತನಾಡಿ, ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ನಿಂದ ರಾಗಿ ಮಿಕ್ಸ್ ಪೂರೈಕೆ ಮಾಡಲಾಗುತ್ತಿದ್ದು, ಬಿಸಿ ಹಾಲಿನಲ್ಲಿ ರಾಗಿ ಮಿಕ್ಸ್ ಬೆರೆಸಿ ನೀಡುವುದರಿಂದ ಮಕ್ಕಳಿಗೆ ಕುಡಿಯಲು ರುಚಿಕರವಾಗಿರುತ್ತಿದ್ದು, ಅವರ ಆರೋಗ್ಯಕ್ಕೆ ಅನುಕೂಲಕರವಾಗಿರಲಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಿಡಿಪಿಐ ಕೆ.ಡಿ.ಬಡಿಗೇರ ಮಾತನಾಡಿ, ರಾಜ್ಯಾದ್ಯಂತ ಏಕಕಾಲಕ್ಕೆ ಶಾಲೆಗಳಲ್ಲಿ ರಾಗಿ ಮಿಕ್ಸ್ ಮಿಶ್ರಿತ ಹಾಲು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಕ್ಷಕರು ಮಕ್ಕಳಿಗೆ ನಿಗದಿತ ದಿನದಂದು ರಾಗಿ ಮಿಕ್ಸ್ ಹೊಂದಿರುವ ಹಾಲನ್ನು ಮಕ್ಕಳಿಗೆ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ಡಿ.ಲಕ್ಷ್ಮಿ, ಬಿಇಒ ಚಂದ್ರಶೇಖರ ಭಂಡಾರಿ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಶ್ರೀನಿವಾಸ ಮರಡಿ, ಶಾಲೆ ಮುಖ್ಯಗುರು ರಾಘವೇಂದ್ರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net