ರಾಜ್ಯದಲ್ಲಿ 60 ಲಕ್ಷ ಮಕ್ಕಳಿಗೆ ಮೊಟ್ಟೆ ವಿತರಣೆ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ

1
Published on

ಮಂಡ್ಯ: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 60 ಲಕ್ಷ ಮಕ್ಕಳಿಗೆ ವಾರದಲ್ಲಿ ಎರಡು ಬಾರಿ 1,20,000 ಮೊಟ್ಟೆ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದ ಹೊಸಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಮಧ್ಯಾಹ್ನ ಉಪಹಾರ ಯೋಜನೆಯಡಿ 1 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪೂರಕ ಪೋಷಣ ಪೌಷ್ಟಿಕ ಆಹಾರ(ಮೊಟ್ಟೆ, ಚಿಕ್ಕಿ, ಬಾಳೆಹಣ್ಣು) ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪೌಷ್ಟಿಕ ಆಹಾರದಿಂದ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಕಾಣಬಹುದು. ಮೊದಲು 1 ರಿಂದ 8 ನೇ ತರಗತಿಯವರೆಗಿನ ಮಕ್ಕಳಿಗೆ ವಾರಕ್ಕೊಮ್ಮೆ ನೀಡಲಾಗುತ್ತಿತ್ತು. 8 ಮತ್ತು 9ನೇ ತರಗತಿಯ ಮಕ್ಕಳು ಒಟ್ಟಿಗೆ ಕುಳಿತು ಊಟ ಮಾಡುವ ಸಂದರ್ಭದಲ್ಲಿ 8ನೇ ತರಗತಿಯ ಮಕ್ಕಳಿಗೆ ಮಾತ್ರ ಮೊಟ್ಟೆ ನೀಡುವುದು ಶಿಕ್ಷಕರು ಹಾಗೂ ಸೇವಿಸುವ ಮಕ್ಕಳಿಗೂ ಕಷ್ಟಕರವಾಗಿತ್ತು. ಈ ವಿಷಯವನ್ನು ಮುಖ್ಯಮಂತ್ರಿ ಗಮನಕ್ಕೆ ತಂದ ತಕ್ಷಣ 1 ರಿಂದ 10 ನೇ ತರಗತಿಯ ಎಲ್ಲ ಮಕ್ಕಳಿಗೆ ವಾರಕ್ಕೆ ಎರಡು ಮೊಟ್ಟೆಯನ್ನು ನೀಡುವಂತೆ ಆದೇಶಿಸಿದರು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಗ್ರಾಮೀಣ ಮತ್ತು ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ದೃಷ್ಠಿಯಿಂದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದವರು, ಮಹಿಳೆಯರು ಹಾಗೂ ರೈತರಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕೆ ಸಾರ್ವಜನಿಕರ ಮುಂದೆ ಇರುವ ಗೃಹ ಜ್ಯೋತಿ, ಶಕ್ತಿ, ಗೃಹಲಕ್ಷ್ಮೀ ಹಾಗೂ ಅನ್ನ ಭಾಗ್ಯ ಯೋಜನೆಗಳೇ ಉದಾಹರಣೆ. ಇನ್ನು ಗೃಹಲಕ್ಷ್ಮೀಯೋಜನೆಗೆ ಆ.30 ರಂದು ಚಾಲನೆ ನೀಡಲಾಗುವುದು ಎಂದರು.

ಸರ್ಕಾರಿ ಶಾಲೆಯ ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ವಾರದಲ್ಲಿ ಎರಡು ಮೊಟ್ಟೆ ನೀಡಲಾಗುತ್ತಿದೆ. ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ಅಥವಾ ಚಿಕ್ಕಿ ನೀಡಲಾಗುವುದು. ರಾಜ್ಯಮಟ್ಟದ ಕಾರ್ಯಕ್ರಮವನ್ನು ಮಂಡ್ಯ ಜಿಲ್ಲೆಯಲ್ಲಿ ಹಮ್ನಿಕೊಂಡಿರುವುದು ಸಂತೋಷದ ವಿಷಯ. ಕೃಷಿ ಇಲಾಖೆಯಲ್ಲೂ ರೈತರಿಗೆ ಪೂರಕವಾಗಿ ಕೃಷಿ ಭಾಗ್ಯ ಸೇರಿದಂತೆ ಇನ್ನಿತರ ಯೋಜನೆಗಳನ್ನು ರೂಪಿಸಲಾಗುವುದು. ಜಿಲ್ಲೆಯಲ್ಲಿ ಮೈಷುಗರ್ ಕಾರ್ಖಾನೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಅಂತೆಯೇ ಕಾಮಗಾರಿಗಳ ಹಣ ಪಾವತಿಗಾಗಿ ಲೋಕೋಪಯೋಗಿ ಇಲಾಖೆಗೆ 10 ಕೋಟಿ ರೂ, ಜಿಲ್ಲಾ ಪಂಚಾಯಿತಿಗೆ 10 ರಿಂದ 15 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದರು.

ಶಾಸಕರಾದ ರವಿಕುಮಾರ್ ಗಣಿಗ, ರಮೇಶ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್‌ಕುಮಾರ್ ಸಿಂಗ್, ಶಾಲಾ ಶಿಕ್ಷಣ ಇಲಾಖೆ ಆಯುಕ್ತೆ ಬಿ.ಬಿ ಕಾವೇರಿ, ಪ್ರಧಾನಮಂತ್ರಿ ಘೋಷಣ್ ಶಕ್ತಿ ನಿರ್ಮಾಣದ ನಿರ್ದೇಶಕ ಸುಬ್ಬ ಕಲ್ಯಾಣ್, ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ, ಮರಿತಿಬ್ಬೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net