

ಹೊನ್ನಾಳಿ: ಹೊನ್ನಾಳಿ- ನ್ಯಾಮತಿ ತಾಲೂಕಿನ ಎಲ್ಲ ಗ್ರಾಮೀಣ ಪ್ರದೇಶಗಳಿಗೆ ಮುಂದಿನ ದಿನಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸೌಲಭ್ಯ ಒದಗಿಸಲಾಗುವುದು ಎಂದು ಶಾಸಕ ಡಿ.ಜಿ. ಶಾಂತನಗೌಡ ಭರವಸೆ ನೀಡಿದರು.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಹೊನ್ನಾಳಿಯಿಂದ ನ್ಯಾಮತಿ ಮಾರ್ಗವಾಗಿ ಶಿವಮೊಗ್ಗ ಹಾಗೂ ವಿಜಯಪುರ, ರಾಯಚೂರು ಕಡೆ ಸಾರಿಗೆ ಬಸ್‌ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ, ಮಾತನಾಡಿದರು.
ನ್ಯಾಮತಿ ತಾಲೂಕಿನ ಗೋವಿನಕೋವಿ ಹಾಗೂ ಚೀಲೂರು ಹೋಬಳಿಯಿಂದ ಗಡಿ ಭಾಗವಾದ ಸೂರಗೊಂಡನಕೊಪ್ಪ ಮತ್ತಿತರ ಗ್ರಾಮಗಳಿಗೆ ಸಾರಿಗೆ ಕಲ್ಪಿಸುವಂತೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಈ ಬಗ್ಗೆ ಸಾರಿಗೆ ಸಚಿವರ ಬಳಿ ಚರ್ಚಿಸಿ ಮತ್ತಷ್ಟು ಹೊಸ ಬಸ್ ಕೊಡುವಂತೆ ಮನವಿ ಮಾಡಿದ್ದೇನೆ. ಇದಕ್ಕೆ ಸಾರಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಎರಡು ತಾಲೂಕಿನ ಅನೇಕ ಗ್ರಾಮಗಳಿಂದ ಶಿವಮೊಗ್ಗ ಹಾಗೂ ದಾವಣಗೆರೆ ಕಾಲೇಜಿಗೆ ನೂರಾರು ವಿದ್ಯಾರ್ಥಿಗಳು ಹೋಗುತ್ತಾರೆ. ಅವರಿಗೆ ಸಕಾಲಕ್ಕೆ ಬಸ್ ಅವಶ್ಯಕತೆ ಇದೆ ಎಂಬುದು ಗೊತ್ತು. ಅದಕ್ಕಾಗಿಯೇ ನಾನು ವೈಯಕ್ತಿಕವಾಗಿ ಗಮನ ಹರಿಸಿ ಎರಡು ತಾಲೂಕುಗಳಿಗೆ ಎಷ್ಟು ಸಾರಿಗೆ ಬಸ್ ಬೇಕೆಂಬ ಬಗ್ಗೆ ಸರ್ವೇ ಮಾಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಂತರ ಬಸ್‌ಗಳ ಸಂಖ್ಯೆ ಏರಿಕೆ ಮಾಡಲು ಅಧಿಕಾರಿಗಳ ಬಳಿ ಚರ್ಚಿಸುತ್ತೇನೆ ಎಂದು ಹೇಳಿದರು.
ಶುಕ್ರವಾರ ಸಂಚಾರ ಆರಂಭಿಸಿರುವ ಹೊನ್ನಾಳಿ- ಶಿವಮೊಗ್ಗ ಬಸ್ ಬೆಳಗ್ಗೆ 8.30ಕ್ಕೆ ಹೊನ್ನಾಳಿ ಬಸ್‌ನಿಲ್ದಾಣದಿಂದ ಹೊರಟು ನ್ಯಾಮತಿ, ಸುರಹೊನ್ನೆ, ಸವಳಂಗ ಮತ್ತಿತರ ಗ್ರಾಮಗಳ ಮೂಲಕ ಶಿವಮೊಗ್ಗಕ್ಕೆ ತಲುಪುತ್ತದೆ. ಎಲ್ಲ ಗ್ರಾಮಗಳಲ್ಲೂ ಬಸ್ ನಿಲುಗಡೆ ಇದೆ. ಇದೇ ಮಾರ್ಗದಲ್ಲಿ ಶಿವಮೊಗ್ಗದಿಂದ ಹೊನ್ನಾಳಿಗೆ ಸಂಚಾರ ಮಾಡುತ್ತದೆ. ಹೊನ್ನಾಳಿಯಿಂದ ನ್ಯಾಮತಿ ಕಡೆ ಸಾರಿಗೆ ಸೌಲಭ್ಯದ ಬಗ್ಗೆ ಪ್ರಯಾಣಿಕರು ಬೇಡಿಕೆ ಇಟ್ಟಿದ್ದರು. ಈಗ ಅದು ಈಡೇರಿಸಿದಂತಾಗಿದೆ ಎಂದರು.
ಹೊನ್ನಾಳಿ ಕೆಎಸ್‌ಆರ್‌ಟಿಸಿ ಬಸ್ ಡಿಪೋದಿಂದ ಉತ್ತರ ಕರ್ನಾಟಕದ ವಿಜಯಪುರ, ರಾಯಚೂರು ಹಾಗೂ ಸದಲಗಾ ನಗರಗಳಿಗೆ ಬಸ್ ಸಂಚಾರ ಆರಂಭಿಸಲಾಗಿದೆ. ಪ್ರಯಾಣಿಕರು ಈ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಬಸ್ ಡಿಪೋ ವ್ಯವಸ್ಥಾಪಕ ಮಹೇಶ್ವರಪ್ಪ, ಲಕ್ಷ್ಮಣ್ ಇತರರು ಇದ್ದರು.