

ಯಲ್ಲಾಪುರ: ತಾಲೂಕಿನಲ್ಲಿ ಜೋರಾದ ಗಾಳಿ, ಮಳೆ ಸೋಮವಾರವೂ ಮುಂದುವರಿದಿದ್ದು, ವಿವಿಧೆಡೆ ಹಾನಿ ಉಂಟಾಗಿದೆ.
ಜೋರಾದ ಗಾಳಿಯ ಪರಿಣಾಮ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟದಲ್ಲಿ ಮರವೊಂದು ಉರುಳಿ ಬಿದ್ದಿತ್ತು. ಇದರಿಂದ ಕೆಲಕಾಲ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.
ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯ ತೇಲಂಗಾರದ ಹೆಗ್ಗಾರಗದ್ದೆ-ಮತ್ತಿಹಕ್ಕಲ ರಸ್ತೆಗೆ ಹಳ್ಳ ನುಗ್ಗಿದ್ದು, 5 ದಿನಗಳಿಂದ ಸಂಪರ್ಕ ಕಡಿತಗೊಂಡಿದೆ. ಸಮೀಪದ ಮನೆ, ತೋಟ, ಗದ್ದೆಗಳಿಗೆ ನೀರು ನುಗ್ಗಿದೆ.
ಬಾಗಿನಕಟ್ಟಾದ ಶ್ರೀಮತಿ ತಿಮ್ಮಣ್ಣ ಕೋಮಾರ ಅವರ ತೋಟಕ್ಕೆ ಹಳ್ಳ ನುಗ್ಗಿ ಅಪಾರ ಪ್ರಮಾಣದ ಅಡಕೆ ಮರಗಳು ಹಳ್ಳದ ಪಾಲಾಗಿವೆ.