

ನಾಗಮಂಗಲ: ತಾಲೂಕಿನ ದೇವಲಾಪುರ ಹೋಬಳಿ ದೊಡ್ಡಚಿಕ್ಕನಹಳ್ಳಿ ಗ್ರಾಮದಲ್ಲಿ ಫಸಲು ಬಿಟ್ಟಿದ್ದ 39 ಅಡಿಕೆ ಮರ ಸೇರಿದಂತೆ ಎರಡು ತೆಂಗಿನ ಮರಗಳನ್ನು ದುಷ್ಕರ್ಮಿಗಳು ಕತ್ತರಿಸಿದ್ದಾರೆ.
ಗ್ರಾಮದ ಹುಚ್ಚೇಗೌಡರ ಮಗ ಸಿ.ಎಚ್.ಶ್ರೀನಿವಾಸ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಈ ಕೃತ್ಯ ನಡೆಸಿರುವ ಕಿಡಿಗೇಡಿಗಳು, ಅಪಾರ ಪ್ರಮಾಣದ ನಷ್ಟ ಉಂಟುಮಾಡಿದ್ದಾರೆ. 3.5 ಎಕರೆ ಕೃಷಿ ಜಮೀನು ಹೊಂದಿರುವ ಶ್ರೀನಿವಾಸ್, ಕಳೆದ ನಾಲ್ಕು ವರ್ಷದ ಹಿಂದೆ 415ಕ್ಕೂ ಹೆಚ್ಚು ಅಡಿಕೆ ಮತ್ತು 185 ತೆಂಗಿನ ಸಸಿಗಳನ್ನು ನೆಟ್ಟಿದ್ದರು. ಇವುಗಳ ಪೈಕಿ ಹೊಂಬಾಳೆ ಹೊಡೆದು ಫಸಲು ಬಿಟ್ಟಿದ್ದ 39 ಅಡಿಕೆ ಮರದ ಜತೆಗೆ ಎರಡು ತೆಂಗಿನ ಮರಗಳನ್ನೂ ಸಹ ಕಿಡಿಗೇಡಿಗಳು ಕತ್ತರಿಸಿ ಹಾಕಿದ್ದಾರೆ. ಯಾವ ಕಾರಣಕ್ಕೆ ಕೃತ್ಯ ನಡೆಸಿದ್ದಾರೆಂಬುದು ತಿಳಿದುಬಂದಿಲ್ಲ.
ಎಂದಿನಂತೆ ತಮ್ಮ ತೋಟಕ್ಕೆ ಹೋದ ಸಂದರ್ಭದಲ್ಲಿ ಮರಗಳನ್ನು ಕಡಿದು ಹಾಕಿರುವುದು ಬೆಳಕಿಗೆ ಬಂದಿದೆ. ಶ್ರೀನಿವಾಸ್ ಸಹೋದರ ಕೃಷ್ಣೇಗೌಡ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಭೇಟಿ ಕೊಟ್ಟ ಪಿಎಸ್‌ಐ ರವಿಕುಮಾರ್ ಪರಿಶೀಲನೆ ನಡೆಸಿದರು.