

ಹೊಳೆನರಸೀಪುರ: ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ಸ್ವಚ್ಛ ಗಾಳಿ ಹಾಗೂ ಸುಂದರ ನಗರವನ್ನು ನಿರ್ಮಾಣ ಮಾಡುವ ಹಾಗೂ ನಮ್ಮಗಳ ಆರೋಗ್ಯ ದೃಷ್ಟಿಯಿಂದ ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡೋಣ ಮತ್ತು ತಾಯಿ ಹೆಸರಿನಲ್ಲಿ ಒಂದು ಗಿಡನೆಟ್ಟು ಪೋಷಿಸುವ ಸಂಕಲ್ಪ ಮಾಡೋಣ ಎಂದು ಪುರಸಭಾಧ್ಯಕ್ಷ ಕೆ.ಶ್ರೀಧರ್ ಕರೆಕೊಟ್ಟರು.
ಪಟ್ಟಣದ ಪುರಸಭೆ ಮುಂಭಾಗದಲ್ಲಿ ಶುಕ್ರವಾರ ರಾಜ್ಯ ನಗರಾಭಿವೃದ್ಧಿ ಇಲಾಖೆಯ ಸ್ವಚ್ಛ ಭಾರತ್ ಮಿಷನ್ ಅಂಗವಾಗಿ ಜಯಚಾಮರಾಜೇಂದ್ರ ವೃತ್ತದಲ್ಲಿ ಪುರಸಭೆ ವತಿಯಿಂದ ‘ಸ್ವಭಾವ ಸ್ವಚ್ಛತೆ, ಸಂಸ್ಕಾರ ಸ್ವಚ್ಛತೆ’ ಎಂಬ ಅಭಿಯಾನದಡಿ ಆಯೋಜಿಸಲಾಗಿದ್ದ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ಅಗತ್ಯವಾಗಿದೆ ಮತ್ತು ಪಾಸ್ಟಿಕ್ ಬಳಕೆಯನ್ನು ಸಂಪೂರ್ಣ ತ್ಯಜಿಸುತ್ತೇವೆ ಎಂಬ ಸಂಕಲ್ಪ ಅಗತ್ಯವಾಗಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷೆ ಜ್ಯೋತಿ ಮಂಜುನಾಥ್, ಪುರಸಭಾ ಸದಸ್ಯ ಎ.ಜಗನ್ನಾಥ್, ಸಮಾಜ ಸೇವಕ ಶಂಕರನಾರಾಯಣ ಐತಾಳ್, ಪುರಸಭೆ ಪರಿಸರ ಇಂಜಿನಿಯರ್ ರುಚಿದರ್ಶಿನಿ, ಅಧಿಕಾರಿ ಪಂಕಜ, ಆರೋಗ್ಯಾಧಿಕಾರಿ ವಸಂತ್, ಸಿಬ್ಬಂದಿ ರಮೇಶ್ ಇತರರಿದ್ದರು.