

ಮೈಸೂರು: ನರ್ಸಿಂಗ್ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಬಹಳಷ್ಟು ಅವಕಾಶಗಳಿವೆ ಎಂದು ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್.ಸದಾನಂದ ಹೇಳಿದರು.
ವಿಕ್ರಂ ಎಜುಕೇಷನಲ್ ಟ್ರಸ್ಟ್ ವತಿಯಿಂದ ಬಿಎಸ್ಸಿ ಅರೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ತ್ವರಿತವಾಗಿ ಮತ್ತು ವಿಸ್ತಾರವಾಗಿ ಬೆಳೆಯುತ್ತಿರುವ ವೈದ್ಯಕೀಯ ಕ್ಷೇತ್ರದಲ್ಲಿ ಶುಶ್ರೂಷಕರಿಗೆ ವಿಪುಲ ಉದ್ಯೋಗಾವಕಾಶಗಳಿವೆ. ನುರಿತ ಶುಶ್ರೂಷಕರ ಬೇಡಿಕೆ ಇದೆ. ಆದರೆ, ಶುಶ್ರೂಷಕರ ಕೊರತೆ ಕಾಡುತ್ತಿದೆ ಎಂದರು
ನರ್ಸಿಂಗ್ ಪದವೀಧರರಿಗೆ ವಿವಿಧೆಡೆ ಕಾರ್ಯನಿರ್ವಹಿಸಲು ಅನೇಕ ಅವಕಾಶಗಳ ಬಾಗಿಲು ತೆರೆದುಕೊಂಡಿವೆ. ಇದನ್ನು ನರ್ಸಿಂಗ್ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ವೈದ್ಯಕೀಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.
ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ವೈದ್ಯರು ರೋಗಿಗಳನ್ನು ತಪಾಸಣೆ ಮಾಡಿ ತೆರಳುತ್ತಾರೆ. ಆದರೆ, ಶುಶ್ರೂಷಕರು ಸದಾ ಕಾಲ ರೋಗಿಗಳೊಂದಿಗೆ ಇದ್ದು ಅವರ ಸೇವೆ ಮಾಡುತ್ತಾರೆ. ವೈದ್ಯರಿಗಿಂತ ಶುಶ್ರೂಷಕರ ಜವಾಬ್ದಾರಿ ಹೆಚ್ಚಿದೆ. ಹೀಗಾಗಿ, ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ಪ್ರಾಂಶುಪಾಲೆ ಡಾ.ಕೆ.ಎನ್.ಲಕ್ಷ್ಮೀ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಅಮರನಾಥ್, ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಪ್ರೊ. ಸಿ.ಎಸ್.ಶೀಲಾದೇವಿ, ಟ್ರಸ್ಟ್ ಅಧ್ಯಕ್ಷ ಡಾ.ಎಚ್.ಎನ್.ಸನತ್ ಕುಮಾರ್, ಟ್ರಸ್ಟಿ ರೇಖಾ ಸನತ್ ಪಾಲ್ಗೊಂಡಿದ್ದರು.