ವೃತ್ತಿ ಬದ್ಧತೆಯಿಂದ ಸೇವೆ ಸಲ್ಲಿಸಲಿ: ಖ್ಯಾತ ವೈದ್ಯ ಡಾ.ಟಿ.ಎಚ್.ಆಂಜನಪ್ಪ ಸಲಹೆ

Nursing students awarded degrees Mandya
Published on

ಮಂಡ್ಯ: ವೈದ್ಯಕೀಯ ಕ್ಷೇತ್ರದಲ್ಲಿ ನರ್ಸಿಂಗ್ ಸೇವೆ ಅನನ್ಯ ಎಂದು ಖ್ಯಾತ ವೈದ್ಯ ಡಾ.ಟಿ.ಎಚ್.ಅಂಜನಪ್ಪ ಹೇಳಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಇನ್ವೆಂಚರ್ ಅಶೋಕ ಶಾಲೆ ಮತ್ತು ಎಸ್.ಡಿ.ಜಯರಾಂ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಆ್ಯಂಡ್ ಪ್ಯಾರಾಮೆಡಿಕಲ್ ಸೈನ್ಸ್‌ನಿಂದ ಆಯೋಜಿಸಿದ್ದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಜಗತ್ತಿನಲ್ಲಿ ಎಲ್ಲಿ ನೋಡಿದರೂ ಡಾಕ್ಟರ್ ಹೋಂಗಳಿಲ್ಲ. ಬದಲಿಗೆ ನರ್ಸಿಂಗ್ ಹೋಂಗಳೇ ಇರುವುದು. ಅದರಂತೆ ನರ್ಸಿಂಗ್‌ಗೆ ಅಷ್ಟೊಂದು ಮಹತ್ವವಿದೆ. ಯಾವ ವೃತ್ತಿಯೂ ಕೀಳಲ್ಲ. ಆದರೆ ನಮ್ಮಲ್ಲಿರುವ ಕೀಳರಿಮೆ ಬಿಟ್ಟು ವೃತ್ತಿ ಗೌರವ ಹೆಚ್ಚಿಸಿಕೊಳ್ಳಬೇಕು. ವೃತ್ತಿ ಬದ್ಧತೆಯಿಂದ ಸೇವೆ ಸಲ್ಲಿಸಬೇಕು ಎಂದು ನುಡಿದರು.

ಮಂಡ್ಯ ನೆಲದಲ್ಲಿ ಪ್ರಥಮ ನರ್ಸಿಂಗ್ ಕಾಲೇಜು ಆರಂಭಿಸಿದ ಹೆಗ್ಗಳಿಗೆ ಎಸ್.ಡಿ.ಜಯರಾಂ ಸಂಸ್ಥೆಗೆ ಸಲ್ಲುತ್ತದೆ. ತರಬೇತಿ ಪಡೆದವರು ಉತ್ತಮವಾಗಿ ಸೇವೆ ಸಲ್ಲಿಸಿದರೆ, ಜನರೇ ನಿಮ್ಮನ್ನು ಗೌರವಿಸುತ್ತಾರೆ ಎಂದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವೃತ್ತಿಕೋರ್ಸ್‌ಗಳ ಶಿಕ್ಷಣ ಪಡೆದು ಸಾಕಷ್ಟು ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ನಮ್ಮ ನರ್ಸಿಂಗ್ ಕಾಲೇಜಿನಲ್ಲಿ ಶಿಕ್ಷಣ ಪಡೆದವರು ಪ್ರತಿಷ್ಠಿತ ಆಸ್ಪತ್ರೆ, ನರ್ಸಿಂಗ್ ಹೋಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಉದ್ಘಾಟಿಸಿದರು. ಪ್ರಾಂಶುಪಾಲೆ ಶ್ರುತಿ ಇತರರಿದ್ದರು. ವೇದಿಕೆ ಸಮಾರಂಭದ ಬಳಿಕ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net