

ವಿಜಯವಾಣಿ ಸುದ್ದಿಜಾಲ ಧಾರವಾಡ
ನರ್ಸಿಂಗ್ ಸೇವೆ ಶಾಂತಿ ಮತ್ತು ನೆಮ್ಮದಿ ನೀಡುವ ಮಹಾನ್ ವೃತ್ತಿ. ದಾದಿಯರು ರೋಗಿಗಳಿಗೆ ಮಾತ್ರವಲ್ಲದೇ ಅವರ ಕುಟುಂಬಗಳಿಗೂ ಶಕ್ತಿ ನೀಡುವ ಕೆಲಸ ಮಾಡುತ್ತಾರೆ ಎಂದು ಎಸ್ಡಿಎಂ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನಕುಮಾರ ಹೇಳಿದರು.
ನಗರದ ಡಾ. ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಎಸ್ಡಿಎಂ ನರ್ಸಿಂಗ್ ಕಾಲೇಜು ವತಿಯಿಂದ ಏರ್ಪಡಿಸಿದ್ದ ಪ್ರಥಮ ವರ್ಷದ ಬಿಎಸ್ಸಿ ನರ್ಸಿಂಗ್ ಮತ್ತು ಜಿಎನ್ಎಂ ಬ್ಯಾಚ್ನ ವಿದ್ಯಾರ್ಥಿಗಳ ದೀಪ ಬೆಳಗಿಸುವ ಕಾರ್ಯಕ್ರಮ ಮತ್ತು ಅಂತರಾಷ್ಟ್ರೀಯ ಶುಶ್ರೂಷಕ ದಿನ ಸಮಾರಂಭದಲ್ಲಿ ಅವರು ಮಾತನಾಡಿದರು.
ವೈದ್ಯಕಿಯ ತುರ್ತು ಸಂದರ್ಭಗಳಲ್ಲಿ ದಾದಿಯರ ಸೇವೆ ಪ್ರಮುಖ ಪಾತ್ರವಹಿಸುತ್ತದೆ ಎಂದರು.
ಕೆಎಲ್ಇ ಕಾಲೇಜಿನ ಪ್ರಾಂಶುಪಾಲ ಡಾ. ಸಂಜಯ್ ಪೀರಾಪುರ ಮಾತನಾಡಿ, ದಾದಿಯರು ಸಮರ್ಪಣಾ ಮನೋಭಾವದೊಂದಿಗೆ, ಕಠಿಣ ಪರಿಶ್ರಮ ಮತ್ತು ಉತ್ಸಾಹದಿಂದ ಅಧ್ಯಯನ ಮಾಡಬೇಕು. ಉತ್ತಮ ಜ್ಞಾನ, ಸಂವಹನ ಕೌಶಲ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ದಾದಿಯರು ಒಗ್ಗಟ್ಟು ಮತ್ತು ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
ದಾದಿಯರಲ್ಲಿ ನಾಯಕತ್ವದ ಗುಣ, ಸಹಾನುಭೂತಿ ಮತ್ತು ಏಕತೆ ಮುಖ್ಯ. ರೋಗಿಗಳ ಸೇವೆ ಮಾಡುವಲ್ಲಿ ಮಾತೃ ಜವಾಬ್ದಾರಿಯನ್ನು ದಾದಿಯರು ಅನುಸರಿಸುತ್ತಾರೆ. ಎಸ್ಡಿಎಂ ಆಸ್ಪತ್ರೆಯಲ್ಲಿ ದಾದಿಯರಿಗೆ ಉತ್ತಮ ಸೌಲಭ್ಯ ಮತ್ತು ಕಾರ್ಯನಿರ್ವಹಿಸಲು ಅತ್ಯುತ್ತಮ ಪರಿಸರ ಒದಗಿಸಲಾಗಿದೆ ಎಂದರು.
ಕುಲ ಸಚಿವ ಡಾ. ಚಿದೇಂದ್ರ ಶೆಟ್ಟರ ಅವರು ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು. ಮಂಜುಳಾ ಕೆ.ಬಿ. ಅವರು ಪ್ರಮಾಣ ವಚನ ಭೋದಿಸಿದರು.
ಎಸ್ಡಿಎಂ ವಿವಿ ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ, ಪ್ರಾಧ್ಯಾಪಕರು, ಇತರರು ಇದ್ದರು. ಪ್ರಾಂಶುಪಾಲ ಡಾ. ಪ್ರಸನ್ನ ದೇಶಪಾಂಡೆ ಸ್ವಾಗತಿಸಿದರು. ಡಾ. ತಿಲಕ ಜೋಶಿ ಮತ್ತು ಪ್ರಿಯಾಂಕಾ ನಿರೂಪಿಸಿದರು. ಡಾ. ರಂಗಪ್ಪ ಆಶಿ ವಂದಿಸಿದರು.