ಕೂಲಿ ಕಾರ್ಮಿಕರ ಮಕ್ಕಳಿಗಾಗಿ ಶೀಘ್ರದಲ್ಲೇ ಕೂಸಿನ ಮನೆ ಯೋಜನೆ ಕಾರ್ಯಾರಂಭ

CEO RAHUL SHINDHE-1
ರಾಹುಲ್ ಶಿಂಧೆ, ಜಿಪಂ ಸಿಇಒ
Published on

ವಿಜಯಪುರ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರ್ಮಿಕರ ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವವರ 6 ತಿಂಗಳಿಂದ 3 ವರ್ಷದವರೆಗಿನ ಶಿಶುಗಳನ್ನು ವ್ಯವಸ್ಥಿತ ಪಾಲನೆ ಪೋಷಣೆ ಮಾಡುವ ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಎಂಬ ಮಹತ್ವದ ಯೋಜನೆ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ತನ್ನ ಮಡಿಲಿಗೆ ಹಾಕಿಕೊಂಡಿದೆ ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ತಿಳಿಸಿದ್ದಾರೆ.

ಜಿಲ್ಲೆಯ ಆಯ್ದ 163 ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಗ್ರಾಪಂ ಮಟ್ಟದಲ್ಲಿ ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಕಾರ್ಯಾರಂಭಗೊಳ್ಳಲಿವೆ ಎಂದು ಅವರು ತಿಳಿಸಿದ್ದಾರೆ.

ಕೂಸಿನ ಮನೆ ಸಿಬ್ಬಂದಿ

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಪಡೆದು ಕೆಲಸ ನಿರ್ವಹಿಸುತ್ತಿರುವ 22 ರಿಂದ 45 ವರ್ಷ ವಯಸ್ಸಿನೊಳಗಿನ ಕನಿಷ್ಠ 10ನೇ ತರಗತಿವರೆಗೆ ವ್ಯಾಸಂಗ ಮಾಡಿರುವ 10 ಮಹಿಳಾ ಕೂಲಿಕಾರ್ಮಿಕರೇ ಈ ಕೂಸಿನ ಮನೆಗೆ ಕೇರ್ ಟೆಕರ್ಸ್ ಆಗಿ ನೇಮಕ ಮಾಡಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ. ಇವರಿಗೆ ಸರ್ಕಾರದಿಂದ ಪ್ರತ್ಯೇಕವಾಗಿ ಗೌರವಧನ ನೀಡದೇ ಮನರೇಗಾ ಯೋಜನೆಯಡಿ ಎನ್‌ಎಂಆರ್ ಸೃಜನೆ ಮಾಡಿ ದಿನಕ್ಕೆ ರೂ. 316 ರಂತೆ ನೂರು ದಿನಗಳವರೆಗ ಕೆಲಸ ನೀಡಲಾಗುತ್ತಿದೆ. ಒಂದು ವೇಳೆ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರು 100 ದಿನ ಕೆಲಸ ನಿರ್ವಹಿಸಿದರೆ ನಂತರ ಮತ್ತೊಬ್ಬರಿಗೆ ಅವಕಾಶ ನೀಡಲಾಗುತ್ತದೆ ಎಂದಿದ್ದಾರೆ.

ನಿರ್ವಹಣೆಗೆ ತರಬೇತಿ

ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಪ್ರಾರಂಭಕ್ಕೆ ರಾಜ್ಯ ಮಟ್ಟದಲ್ಲಿ ಜಿಲ್ಲೆಯ 5 ಜನರಿಗೆ ತರಬೇತಿ ನೀಡಲಾಗಿದೆ. ರಾಜ್ಯ ಮಟ್ಟದಲ್ಲಿ ತರಬೇತಿ ಪಡೆದುಕೊಂಡ ಮಾಸ್ಟರ್ ಟ್ರೇನರ್‌ಗಳು ವಿಜಯಪುರ ಜಿಲ್ಲೆಯ ಐದು ಸ್ಥಳಗಳಲ್ಲಿ ಈಗಾಗಲೇ ಎಲ್ಲ ಗ್ರಾಮ ಪಂಚಾಯಿತಿ ಕೇರ್ ಟೇಕರ್ಸ್‌ಗಳಿಗೆ ತರಬೇತಿ ನೀಡಿದ್ದಾರೆ.

ಅನುದಾನ ವಿವರ

ಕೂಸಿನ ಮನೆ ಆರಂಭಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಖಾಲಿ ಇರುವ ಸರ್ಕಾರಿ ಶಾಲೆ, ಅಂಗನವಾಡಿ, ಸಮುದಾಯ ಭವನ ಸೇರಿದಂತೆ ಇತರೆ ಸರ್ಕಾರಿ ಕಟ್ಟಡಗಳ ಆಯ್ಕೆಗೆ ಪರಿಗಣಿಸಿದೆ. ಈ ಕಟ್ಟಡಗಳ ಅಲ್ಪ-ಸ್ವಲ್ಪ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆಗಾಗಿ ಸರ್ಕಾರ ಆರಂಭದಲ್ಲಿ ಪ್ರತಿ ಘಟಕಕ್ಕೆ 1ಲಕ್ಷ ರೂ. ಅನುದಾನ ಬಿಡುಗಡೆ ಮಾಡುತ್ತದೆ. ಶಿಶುಗಳಿಗೆ ಪೂರಕ ಪೌಷ್ಠಿಕ ಆಹಾರ, ಅಗತ್ಯ ಔಷಧ ಮತ್ತಿತರ ಸೌಲಭ್ಯಗಳು ಈ ಕೇಂದ್ರದಲ್ಲಿ ದಾಸ್ತಾನು ಇರಿಸಲಾಗುವುದು ಎಂದು ತಿಳಿಸಿದ್ದಾರೆ.

ಯೋಜನೆಯ ಉದ್ದೇಶ

ಕೂಸಿನ ಮನೆ (ಶಿಶು ಪಾಲನಾ ಕೇಂದ್ರ)ಗಳ ಮುಖ್ಯ ಉದ್ದೇಶ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಜಮೀನುಗಳಲ್ಲಿ ಕೃಷಿ ಕೆಲಸಕ್ಕೆ ತೆರಳುತ್ತಾರೆ. ಕೂಲಿಕಾರ್ಮಿಕರು ಹಾಗೂ ಕೃಷಿ ಕಾರ್ಮಿಕರು ಬಹುತೇಕರು ಬಡ ಕುಟುಂಬದವರಾಗಿದ್ದು, ಪ್ರತಿ-ನಿತ್ಯ ಕೂಲಿ ಕೆಲಸಕ್ಕೆ ತೆರಳುವ ಅನಿವಾರ್ಯತೆ ಇರುತ್ತದೆ. ಇಂತಹ ಕುಟುಂಬದ ಮಹಿಳೆಯರು ತಮ್ಮ ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವುದು ಅಸಾಧ್ಯ. ಮಹಿಳೆಯರು ತಮ್ಮ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಅವರು ಕೆಲಸದಿಂದ ಮನೆಗೆ ಮರಳುವವರೆಗೆ ಮಗುವಿಗೆ ತಾಯಿ ಹಾಲು ದೊರೆಯುವುದಿಲ್ಲ ಜೊತೆಗೆ ಪೌಷ್ಠಿಕ ಆಹಾರ ದೊರೆಯುವುದಿಲ್ಲ. ಇದರಿಂದ ಮಕ್ಕಳು ಅಪೌಷ್ಠಿಕತೆಗೆ ಒಳಗಾಗಬಹುದಾಗಿದೆ. ಇದರಿಂದ ಗ್ರಾಮೀಣರ ಮಾನಸಿಕ ಆರೋಗ್ಯವು ಹಾಳಾಗುತ್ತದೆ. ಈ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಈ ಯೋಜನೆ ಆರಂಭಿಸಿದೆ. ಹಳ್ಳಿಗಳ ಮಹಿಳೆಯರು ತಮ್ಮ ಮಕ್ಕಳ ಕುರಿತು ಚಿಂತಿಸಿ, ಮಾನಸಿಕವಾಗಿ ಕುಗ್ಗದೇ ಈ ಯೋಜನೆಯ ಸದುಪಯೋಗಪಡೆದುಕೊಂಡು ನಿಶ್ಚಿಂತೆಯಿಂದ ಕೂಸಿನ ಮನೆಯಲ್ಲಿ ತಮ್ಮ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ತೆರಳಬಹುದಾಗಿದೆ ಎಂದು ಸಿಇಒ ರಾಹುಲ್ ಶಿಂಧೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net