ಕ್ಲೀನಿಕಲ್‌ ಸೌಲಭ್ಯ ಒದಗಿಸುವಂತೆ ನರ್ಸಿಂಗ್‌ ವಿದ್ಯಾರ್ಥಿಗಳ ಆಗ್ರಹ

Nursing-Students
Published on

ಕಾರವಾರ: ಕ್ಲೀನಿಕಲ್ ಸೌಲಭ್ಯ ಒದಗಿಸಲು ಇಲ್ಲಿನ ಕ್ರಿಮ್ಸ್  ನಿರಾಕರಿಸಿದ ಕಾರಣ ತಾಲೂಕಿನ ಸದಾಶಿವಗಡದ ಸುಮತಿ ನಾಯ್ಕ ಇನ್ಸ್ಟ್ಯೂಟ್‌ನ ಸುಮಾರು 100 ಕ್ಕೂ ಅಧಿಕ ನರ್ಸಿಂಗ್ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.
ಬಾಪೂಜಿ ಗ್ರಾಮೀಣ ವಿಕಾಸ ಸಮಿತಿಯಡಿ 22 ವರ್ಷಗಳಿಂದ ಸದಾಶಿವಗಡದಲ್ಲಿ ನರ್ಸಿಂಗ್ ಶಿಕ್ಷಣ ನೀಡುತ್ತಿರುವ ಸಂಸ್ಥೆಯು ಜಿಲ್ಲಾ ಆಸ್ಪತ್ರೆಯಲ್ಲೇ ಪ್ರಾಯೋಗಿಕ ತರಗತಿ ಸೌಲಭ್ಯವನ್ನು ಪಡೆಯುತ್ತಿತ್ತು. ಅದಕ್ಕಾಗಿ ಪ್ರತಿ ವಿದ್ಯಾರ್ಥಿಯಿಂದ  4.5 ಸಾವಿರ ರೂ. ಶುಲ್ಕವನ್ನು ಕ್ರಿಮ್ಸ್ ಪಡೆಯುತ್ತಿತ್ತು.
ಆದರೆ, ಈ ಬಾರಿ ಕ್ಲೀನಿಕಲ್ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿ, 4.5 ಲಕ್ಷ ರೂ.ಗಳನ್ನು ಕ್ರಿಮ್ಸ್ಗೆ ಪಾವತಿಸಿದ ನಂತರ. ನರ್ಸಿಂಗ್ ಕಾಲೇಜ್‌ಗಳು ಸ್ವಂತ ಬೋಧಕ ಆಸ್ಪತ್ರೆ ಹೊಂದಿರಬೇಕು. ಕ್ರಿಮ್ಸ್ನಲ್ಲಿ ಹೊರಗಿನ ನರ್ಸಿಂಗ್ ಕಾಲೇಜ್‌ಗಳಿಗೆ ಅವಕಾಶ ಕಲ್ಪಿಸದಂತೆ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಅವರು ಸೂಚನೆ ನೀಡಿದ್ದಾರೆ. ಅದರಂತೆ ನಿಮಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕ್ರಿಮ್ಸ್ ಡೀನ್ ಡಾ.ಗಜಾನನ ನಾಯ್ಕ ತಿರಸ್ಕರಿಸಿದ್ದಾರೆ. ನಗರದಲ್ಲಿ ಬೇರೆ ಸರ್ಕಾರಿ ಆಸ್ಪತ್ರೆಯೂ ಇಲ್ಲದ ಕಾರಣ ಸಮಸ್ಯೆಯಾಗಿದೆ ಎಂದು ಕಾಲೇಜ್‌ನ ಆಡಳಿತ ಮಂಡಳಿ ಸದಸ್ಯರು ತಮ್ಮ ಅಳಲು ತೋಡಿಕೊಂಡರು. ಶಾಸಕ ಸತೀಶ ಸೈಲ್ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರಿಗೆ ಮನವಿ ಸಲ್ಲಿಸಿದರು. ಬಿಜಿವಿಎಸ್‌ನ ಕಿಶೋರ ರಾಣೆ, ಮಂಜುನಾಥ ಪವಾರ್ ಇತರರು ಇದ್ದರು.

ಕಾರವಾರದ ಕ್ರಿಮ್ಸ್ ರಾಜ್ಯದಲ್ಲಿ ಅತ್ಯಂತ ಕೆಟ್ಟ ಆಡಳಿತ ವ್ಯವಸ್ಥೆ ಹೊಂದಿದೆ. ಇಲ್ಲಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ. ಗೋವಾ, ಮಂಗಳೂರು, ಮಣಿಪಾಲಕ್ಕೆ ರೋಗಿಗಳನ್ನು ಕಳಿಸಬೇಕಾಗಿದೆ. ಮೇಲಾಗಿ ಈಗ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳಿಗೆ ಅವಕಾಶ ನೀಡದೇ ಸಮಸ್ಯೆ ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ತೊಂದರೆಯಾಗಲು ಬಿಡುವುದಿಲ್ಲ. ವೈದ್ಯಕೀಯ ಶಿಕ್ಷಣ ಸಚಿವರ ಜತೆ ಮಾತನಾಡುತ್ತೇನೆ.ಸತೀಶ ಸೈಲ್ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net