

ರಾಯಚೂರು: ದೇಶಕ್ಕೆ ರೈತರು ಹೇಗೆ ಬೆನ್ನೆಲುಬಾಗಿದ್ದಾರೆ ಅವರಂತೆಯೇ ವೈದ್ಯರು ಮತ್ತು ದಾದಿಯರು ಜನರ ಆರೋಗ್ಯ ರಕ್ಷಣೆಗೆ ಬೆನ್ನೆಲುಬಾಗಿದ್ದಾರೆ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಮುಖ್ಯಸ್ಥೆ ಸ್ಮೀತಾ ಅಕ್ಕ ಹೇಳಿದರು.
ಸ್ಥಳೀಯ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದಾದಿಯರು ತಮ್ಮ ಸ್ವಂತ ಕೆಲಸಗಳನ್ನು ಬದಿಗೊತ್ತಿ ಜನರಿಗೆ ಸೂಕ್ತ ಚಿಕಿತ್ಸೆ ನೀಡಲು ಮುಂದಾಗುತ್ತಾರೆ ಎಂದರು.
ಕರೋನಾ ಸಂದರ್ಭದಲ್ಲಿ ನಮ್ಮ ಕುಟುಂಬಸ್ಥರು ಮುಟ್ಟಲು ಹಿಂಜರಿಯುತ್ತಿದ್ದ ಸಂದರ್ಭದಲ್ಲಿ ವೈದ್ಯರು ಮತ್ತು ದಾದಿಯರು ತಮ್ಮ ಜೀವದ ಹಂಗು ತೊರೆದು ಸೋಂಕಿತರ ಜೀವ ಕಾಪಾಡಿದ್ದಾರೆ. ಅವರ ನಿಸ್ವಾರ್ಥ ಸೇವೆಯಿಂದ ಲಕ್ಷಾಂತರ ಜೀವಗಳು ಉಳಿಯುವಂತಾಗಿದೆ.
ಜನರು ಸದೃಢ ಆರೋಗ್ಯದ ಜತೆಗೆ ಆಧಾತ್ಮಿಕವಾಗಿ ಸಶಕ್ತರಾಗುವತ್ತ ಹೆಚ್ಚಿನ ಗಮನ ಹರಿಸಬೇಕಾಗಿದೆ. ಒಳ್ಳೆಯ ವಿಚಾರಧಾರೆ, ಕೆಲಸಗಳು ನಮ್ಮನ್ನು ಮಾನಸಿಕವಾಗಿ ಸದೃಢರನ್ನಾಗಿ ಮಾಡುತ್ತವೆ ಎಂದು ಸ್ಮೀತಾ ಅಕ್ಕ ತಿಳಿಸಿದರು.
ಈ ಸಂದರ್ಭದಲ್ಲಿ ನಗರದ ವಿವಿಧ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ದಾದಿಯರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿಗಳಾದ ಕೆ.ದೇವಣ್ಣ ನಾಯಕ, ಸಿ.ಬಿ.ಪಾಟೀಲ್, ವಿದ್ಯಾಲಯದ ಶಾರದಾ ಅಕ್ಕ, ಮುಖಂಡರಾದ ಜಗದೀಶ, ನಾಗಚಂದ್ರರೆಡ್ಡಿ, ದಂಡಪ್ಪ ಬಿರಾದರ ಉಪಸ್ಥಿತರಿದ್ದರು.