

ವಿಜಯವಾಣಿ ಸುದ್ದಿಜಾಲ ಜನ್ನಾಡಿ
ವಿದ್ಯಾರ್ಥಿಗಳಲ್ಲಿ ಗಣಿತ ಹಾಗೂ ಸಂಖ್ಯಾಶಾಸ್ತ್ರ ಕಬ್ಬಿಣದ ಕಡಲೆ ಎಂದು ಬೇರೂರಿದೆ. ಗಣಿತವನ್ನು ಇಷ್ಟಪಟ್ಟರೆ ತಾನಾಗಿಯೇ ಸುಲಭವಾಗುತ್ತದೆ. ವ್ಯವಹಾರಗಳಲ್ಲಿ ಹಾಗೂ ಜೀವನಕ್ಕೆ ಸಂಖ್ಯಾಶಾಸ್ತ್ರ ಅವಶ್ಯ. ಜಗತ್ತಿನ ಆರ್ಥಿಕ ಬಲವರ್ಧನೆ ಗಣಿತ ಹಾಗೂ ಸಂಖ್ಯಾಶಾಸ್ತ್ರದಿಂದ ಸಾಧ್ಯವಾಗಿದೆ ಎಂದು ಉಡುಪಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಾರುತಿ ಹೇಳಿದರು.
ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಪದವಿ ಪೂರ್ವ ಕಾಲೇಜು ಸಂಖ್ಯಾಶಾಸ್ತ್ರ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ ಬೋಧನಾ ಕೌಶಲ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಾಚಾರ್ಯ ರಾಮಕೃಷ್ಣ ಬಿ.ಜಿ ಅಧ್ಯಕ್ಷತೆ ವಹಿಸಿ, ಸಂಖ್ಯಾಶಾಸ್ತ್ರ ಬೋಧಕರಲ್ಲಿ ಅತ್ಯದ್ಭುತ ಜಾಣ್ಮೆ ಇರುತ್ತದೆ. ಈ ಮೂಲಕ ವಿದ್ಯಾರ್ಥಿಗಳನ್ನು ತರ್ಕಬದ್ಧ ವಿಚಾರಗಳಿಗೆ ತಯಾರು ಮಾಡಬಹುದು ಎಂದರು.
ರಾಜಮೋಹನ್ ಹಾಗೂ ವಿಷ್ಣುಮೂರ್ತಿ ಉಪಾಧ್ಯಾಯ ಶುಭಹಾರೈಸಿದರು. ಪ್ರೊ.ಗಣೇಶ್ ಕೆ. ಆರ್-ಪ್ರೋಗ್ರಾಮಿಂಗ್ ಹಾಗೂ ಪ್ರೊ.ಪ್ರಭಾಕರ ಶೆಟ್ಟಿಗಾರ ಪ್ರಶ್ನೆಪತ್ರಿಕೆಯ ನೀಲಿನಕ್ಷೆ ವಿಚಾರ ಕುರಿತು ಕಾರ್ಯಾಗಾರ ನಡೆಸಿದರು. ವೈಭವಿ ಮತ್ತು ತಂಡ ಪ್ರಾರ್ಥಿಸಿದರು. ಪ್ರಭಾಕರ ಶೆಟ್ಟಿಗಾರ ಸ್ವಾಗತಿಸಿದರು. ನೇತ್ರಾವತಿ ಬುಡ್ಡಿ ವಂದಿಸಿದರು. ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು.