ಹೊಸ ಪಾಲಿಕೆಗಳ ಸಂಖ್ಯೆ ತಿಂಗಳಲ್ಲಿ ನಿರ್ಧಾರ: ಡಿಸಿಎಂ ಶಿವಕುಮಾರ್ ಹೇಳಿಕೆ

kempegowda jayati
Published on

ಬೆಂಗಳೂರು: ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ರಚಿಸಲಿರುವ ಹೊಸ ಪಾಲಿಕೆಗಳ ಸಂಖ್ಯೆಯನ್ನು ತಿಂಗಳಲ್ಲಿ ನಿರ್ಧರಿಸಿ ವಿಂಗಡಣೆ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿರುವ ಡಾ. ರಾಜ್‌ಕುಮಾರ್ ಸಭಾಂಗಣದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯುತ್ಸವ ಹಾಗೂ 2025ನೇ ಸಾಲಿನ ‘ಕೆಂಪೇಗೌಡ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಶುಕ್ರವಾರ ಮಾತನಾಡಿದರು.

ಬೆಂಗಳೂರು ನಗರಕ್ಕೆ ಹೊಸ ಸ್ವರೂಪ ನೀಡಲು ಗ್ರೇಟರ್ ಬೆಂಗಳೂರು ಪ್ರದೇಶ (ಜಿಬಿಎ) ಪರಿಕಲ್ಪನೆ ಅಡಿಯಲ್ಲಿ ಜಾರಿಗೊಳಿಸಲು ಕಾಯ್ದೆ ಮಾಡಿದ್ದೇವೆ. ಇದರಡಿಯೇ ಪ್ರಥಮ ಬಾರಿಗೆ ನಗರ ನಿರ್ಮಾತೃ ಕೆಂಪೇಗೌಡರ ಜಯಂತಿ ಆಚರಿಸಿದ್ದೇವೆ. ಮುಂದಿನ ದಿನಗಳಲ್ಲಿ ಜಿಬಿಎ ವ್ಯಾಪ್ತಿಗೆ ಇನ್ನಷ್ಟು ಪ್ರದೇಶಗಳನ್ನು ಸೇರ್ಪಡೆ ಮಾಡಿಕೊಳ್ಳುವುದು ಹಾಗೂ ಪಾಲಿಕೆ ಸಂಖ್ಯೆಯನ್ನು ನಿಖರವಾಗಿ ಗುರುತಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

500 ವರ್ಷಗಳ ಹಿಂದೆಯೇ ಕೆಂಪೇಗೌಡರು ಬೆಂಗಳೂರು ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ್ದರು. ಅಂದೇ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯವನ್ನು ಕೈಗೊಂಡ ಪರಿಣಾಮ ಈಗ ಉದ್ಯಾನ ನಗರವು ವಿಶ್ವ ಭೂಪಟದಲ್ಲಿ ಮಿನುಗುತ್ತಿದೆ. ಎಲ್ಲೆಡೆ ಜನರು ಬೆಂಗಳೂರಿಗೆ ಬಂದು ನೆಲೆಸಲು ಇಷ್ಟಪಡುತ್ತಿದ್ದು, ಮೂಲಸೌಕರ್ಯ ಕೊರತೆ ಕಾಡಲಾರಂಭಿಸಿದೆ. ಹೊಸದಾಗಿ ಎಲಿವೇಟೆಡ್ ಕಾರಿಡಾರ್, ಸುರಂಗ ಯೋಜನೆ ಸೇರಿ 1 ಲಕ್ಷ ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ಹೊಸ ಸ್ಟೇಡಿಯಂ ನಿರ್ಮಾಣ:

ನಗರದಲ್ಲಿ ಬೃಹತ್ ಕ್ರೀಡಾಂಗಣಗಳು ಕಡಿಮೆ ಇವೆ. ಕ್ರೀಡೆಗೆ ಉತ್ತೇಜನ ನೀಡಲು ಬಿಡಿಎ ವ್ಯಾಪ್ತಿಯಲ್ಲಿ 60 ಸಾವಿರ ಮಂದಿ ಕುಳಿತು ವೀಕ್ಷಿಸುವ ನೂತನ ಸ್ಟೇಡಿಯಂಅನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಇದನ್ನು ಹೇಗೆ ಕಾರ್ಯರೂಪಕ್ಕೆ ತರಬೇಕು ಎಂಬುದನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದು ಡಿಸಿಎಂ ವಿವರಿಸಿದರು.

ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾರೆಡ್ಡಿ, ಬಿಡಿಎ ಅಧ್ಯಕ್ಷ ಎನ್.ಎ ಹ್ಯಾರೀಸ್, ಮೇಲ್ಮನೆ ಸದಸ್ಯ ಟಿ.ಎ.ಶರವಣ, ಬಿಬಿಎಂಪಿ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಕರವೇ ಅಧ್ಯಕ್ಷ ನಾರಾಯಣಗೌಡ, ಪಾಲಿಕೆ ಅಧಿಕಾರಿ/ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್‌ರಾಜ್ ಹಾಗೂ ಇತರರು ಹಾಜರಿದ್ದರು.

ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ:

ಬಿಬಿಎಂಪಿ ಘೋಷಿಸಿರುವ 2025ನೇ ಸಾಲಿನ ಕೆಂಪೇಗೌಡ ಪ್ರಶಸ್ತಿಯನ್ನು 50 ಸಾಧಕ ಪುರಸ್ಕೃತರಿಗೆ ಪ್ರದಾನ ಮಾಡಲಾಯಿತು. ಪುರಸ್ಕೃತರ ಪೈಕಿ ಕ್ರೀಡಾಪಟು ಮಹೇಶ್ ಭೂಪತಿ, ನಗರ ಯೋಜಕ ರವಿಚಂದರ್ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಎಚ್.ಸಿದ್ದಯ್ಯ ಗೈರಾಗಿದ್ದರು. ಇದೇ ವೇಳೆ ಪಾಲಿಕೆಯ 51 ಅಧಿಕಾರಿ/ಸಿಬ್ಬಂದಿಗೆ 2025ನೇ ಸಾಲಿನ ‘ಉತ್ತಮ ಅಧಿಕಾರಿ/ನೌಕರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ವೇಳೆ ವೇದಿಕೆ ಮುಂಭಾಗದಲ್ಲಿ ಪುರಸ್ಕೃತರ ಚಿತ್ರ ಕ್ಲಿಕ್ಕಿಸಲು ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಐ ಫೋನ್ ಕಳೆದುಕೊಂಡ ಅಧಿಕಾರಿ:

ಸಮಾರಂಭ ನಡೆಯುವ ವೇಳೆ ಬಿಬಿಎಂಪಿ ನಿಕಟಪೂರ್ವ ಆಡಳಿತಾಧಿಕಾರಿ, ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಎಸ್.ಆರ್. ಉಮಾಶಂಕರ್ ಅವರು ಐ ಫೋನ್ ಕಳೆದುಕೊಂಡರು. ನಿರೂಪಕರು ಫೋನ್ ಕಳೆದ ಬಗ್ಗೆ ಪ್ರಕಟಣೆ ನೀಡಿ ಸಿಕ್ಕಿದವರು ವಾಪಸ್ ನೀಡುವಂತೆ ಮನವಿ ಮಾಡಿದರು. ಸ್ವತ: ಪಾಲಿಕೆಯ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಫೋನ್ ಮರಳಿಸುವಂತೆ ವಿನಂತಿಸಿದರು. ಕೊನೆಗೂ ಐ ಫೋನ್ ಸಿಗಲಿಲ್ಲ.

ನಮ್ಮ ಸರ್ಕಾರ ಕೆಂಪೇಗೌಡರು ಹಾಕಿಕೊಟ್ಟಿರುವ ದಾರಿಯಲ್ಲಿ ಮುನ್ನಡೆಯುತ್ತಿದೆ. ನಗರ ಅಭಿವೃದ್ಧಿಗೆ ಬೇಕಾದ ಸೌಕರ್ಯ ಕಲ್ಪಿಸಲು ಹತ್ತುಹಲವು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಜನರ ಪ್ರೀತಿ ಗಳಿಸುವ ರೀತಿಯಲ್ಲಿ ಆಡಳಿತ ನಡೆಸಲು ಬದ್ಧರಾಗಿದ್ದೇವೆ. ಆತ್ಮಸಾಕ್ಷಿಯಾಗಿಯಾಗಿ ಕೆಲಸ ಮಾಡಿದರೆ ಅದಕ್ಕಿಂತ ಸಮಾಧಾನ ಮತ್ತೊಂದಿಲ್ಲ ಎಂಬುದನ್ನು ಎಲ್ಲರೂ ಅರಿಯಬೇಕು.

- ಡಿ.ಕೆ.ಶಿವಕುಮಾರ್, ಡಿಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net