

ರಾಜೇಶ್ ಶೆಟ್ಟಿ ದೋಟ ಮಂಗಳೂರು
ಮಲೆನಾಡು, ಪಶ್ಚಿಮಘಟ್ಟದ ತಪ್ಪಲು ಪ್ರದೇಶ, ಉದ್ಯಾನವನಗಳ ಅಂಚಿನಲ್ಲಷ್ಟೇ ಕಂಡು ಬರುತ್ತಿದ್ದ ಮಾನವ-ಪ್ರಾಣಿ ಸಂಘರ್ಷ ಇತ್ತೀಚೆಗೆ ಕರಾವಳಿ ಭಾಗಕ್ಕೂ ವಿಸ್ತರಣೆಯಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿರತೆಗಳು ಜನವಸತಿ ಪ್ರದೇಶಕ್ಕೆ ನುಗ್ಗಿ ಅವಾಂತರ ಸೃಷ್ಟಿಸುತ್ತಿರುವ ಹಲವಾರು ಪ್ರಕರಣಗಳು ನಡೆಯುತ್ತಿವೆ.
ಅರಣ್ಯಗಳ ಮೇಲೆ ಮಾನವನ ಹಸ್ತಕ್ಷೇಪದ ಪರಿಣಾಮ ಚಿರತೆಗಳು ನಾಡಿಗೆ ನುಗ್ಗುವ ಪರಿಸ್ಥಿತಿ ಎದುರಾಗುತ್ತಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಜತೆಗೆ ಚಿರತೆಗಳ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಚಿರತೆಗಳ ಪಾಲಿಗೆ ನೆಚ್ಚಿನ ತಾಣಗಳಾಗುತ್ತಿವೆ ಎಂಬುದನ್ನು ಇತ್ತೀಚಿನ ಘಟನೆಗಳೇ ಹೇಳುತ್ತಿವೆ.
2020 ಡಿ.21ರಂದು ಪ್ರಕಟವಾದ 2018ರ ಚಿರತೆ ಗಣತಿ ಪ್ರಕಾರ ದೇಶದಲ್ಲಿ 12,852 ಚಿರತೆಗಳಿವೆ. ಇದು 2014ರಿಂದ ಶೇ.60ರಷ್ಟು ಹೆಚ್ಚಳವಾಗಿದೆ. ರಾಜ್ಯವಾರು ಚಿರತೆಗಳ ಸಂಖ್ಯೆಯಲ್ಲಿ ಕರ್ನಾಟಕದಲ್ಲಿ 1,783 ಚಿರತೆಗಳಿದ್ದು, ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಮೈಸೂರು, ತುಮಕೂರು, ಹಾಸನ, ಉಡುಪಿ ಹಾಗೂ ರಾಮನಗರದಲ್ಲಿ ಹೆಚ್ಚು ಚಿರತೆಗಳಿವೆ.
ಹೆಜ್ಜೆ ಗುರುತು: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಎರಡು ವರ್ಷಗಳಿಂದೀಚೆಗೆ ಚಿರತೆ ಕಾಣಿಸಿಕೊಂಡಿರುವ 65 ಪ್ರಕರಣ ವರದಿಯಾಗಿದೆ. 17 ಚಿರತೆಗಳನ್ನು ಬೋನು ಅಳವಡಿಸಿ ಸೆರೆ ಹಿಡಿದು ಸ್ಥಳಾಂತರಿಸಲಾಗಿದೆ. 5 ಚಿರತೆಗಳು ಬಾವಿಗೆ ಬಿದ್ದಿದ್ದು, 2 ಮೃತಪಟ್ಟಿವೆ. ಉರುಳಿಗೆ ಬಿದ್ದ 5 ಚಿರತೆಗಳಲ್ಲಿ 2 ಮೃತಪಟ್ಟಿವೆ. 4 ಚಿರತೆಗಳ ಕಳೇಬರ ಪತ್ತೆಯಾಗಿದೆ. ಫೆ.2ರಂದು ಕುಂದಾಪುರ ಬಡಾಕೆರೆ ಬಳಿ ಅಪರೂಪದ ಗಂಡು ಕರಿಚಿರತೆ ರೈಲು ಡಿಕ್ಕಿ ಹೊಡೆದು ಅಸುನೀಗಿತ್ತು. ಫೆ.3ರಂದು ಕಡಬದಲ್ಲಿ ನಾಯಿಯನ್ನು ಓಡಿಸಿಕೊಂಡು ಬಂದು ಶೌಚಗೃಹದಲ್ಲಿ ಬಂಧಿಯಾಗಿದ್ದ ಚಿರತೆ ಬಳಿಕ ತಪ್ಪಿಸಿಕೊಂಡಿತ್ತು. ಮಾ.21ರಂದು ಬ್ರಹ್ಮಾವರದಲ್ಲಿ ನಾಯಿಯನ್ನು ಬೆನ್ನಟ್ಟಿ ಬಂದು ಮನೆಯಲ್ಲಿ ಬಂಧಿಯಾದ ಚಿರತೆಯನ್ನು ಬಳಿಕ ಕಾಡಿಗೆ ಸ್ಥಳಾಂತರಿಸಲಾಗಿದೆ.
9 ಮಂದಿಗೆ ಗಾಯ: ಇಬ್ಬರು ಅರಣ್ಯ ಸಿಬ್ಬಂದಿ ಸಹಿತ 9 ಮಂದಿ ಚಿರತೆ ದಾಳಿಯಿಂದ ಗಾಯಗೊಂಡಿದ್ದಾರೆ. 2019 ಫೆ.15ರಂದು ಕಾಂತಾವರದಲ್ಲಿ ತರಗೆಲೆ ಸಂಗ್ರಹಿಸುತ್ತಿದ್ದ ದಂಪತಿ, ಫೆ.18ರಂದು ಸಿದ್ದಾಪುರ ಆಜ್ರಿ ಗ್ರಾಮದ ಮಹಿಳೆ, ಮಾ.4 ಕುಂದಾಪುರ ಹುಣ್ಸೆಕಟ್ಟೆ ಗ್ರಾಮದ ಮಹಿಳೆ, 2020 ಜ.2ರಂದು ಕಡಬ ತಾಲೂಕಿನ ಪಂಜ ಅರಣ್ಯ ಪ್ರದೇಶದಲ್ಲಿ ವ್ಯಕ್ತಿ, ಇಬ್ಬರು ಅರಣ್ಯ ಸಿಬ್ಬಂದಿ, 2021 ಫೆ.12ರಂದು ಸುಬ್ರಹ್ಮಣ್ಯದ ರೆಂಜಿಲಾಡಿ ಗ್ರಾಮದ ಹೇರ ಎಂಬಲ್ಲಿ ಕೃಷಿಕ ದಂಪತಿ ಚಿರತೆ ದಾಳಿಯಿಂದ ಗಾಯಗೊಂಡಿದ್ದರು.
ವಾಸಕ್ಕೆ ಸಣ್ಣ ಪೊದೆ ಸಾಕು: ಚಿರತೆಗಳ ವಾಸಕ್ಕೆ ದಟ್ಟ ಅರಣ್ಯವೇ ಬೇಕಿಲ್ಲ. ಯಾವುದೇ ಪರಿಸರಕ್ಕೆ ಹೊಂದಿಕೊಳ್ಳಬಲ್ಲ ಇವು, ಸಣ್ಣ ಕುರುಚಲು ಪೊದೆಗಳಿರುವ ಜಾಗದಲ್ಲೂ ಜೀವಿಸಿ, ಆಹಾರ ಸಂಗ್ರಹಿಸಿ ಸಂತಾನೋತ್ಪತ್ತಿ ನಡೆಸಬಲ್ಲದು. ಸಣ್ಣ ಪೊದೆಯ ಮರೆಯಲ್ಲೇ ದಿನಗಟ್ಟಲೇ ಅವಿತು ಕೂರಬಲ್ಲದು. ಇಲ್ಲಿನ ಕಲ್ಲು ಕ್ವಾರಿ ಪ್ರದೇಶ ಇವುಗಳ ಆವಾಸಕ್ಕೆ ಪ್ರಶಸ್ತ ತಾಣವಾಗುತ್ತಿದೆ. ರಾತ್ರಿ ವೇಳೆ ಆಹಾರ, ನೀರು ಅರಸಿ ಜನವಸತಿ ಪ್ರದೇಶದತ್ತ ನುಗ್ಗುತ್ತಿದೆ ಎನ್ನುತ್ತಾರೆ ವನ್ಯಜೀವಿ ತಜ್ಞರು.
ಪರಿಹಾರವೇನು?: ಮಾನವ- ಚಿರತೆ ಸಂಘರ್ಷ ಕಡಿಮೆಗೊಳಿಸಲು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ 2010ರಲ್ಲಿ ರೂಪಿಸಿದ ಮಾರ್ಗಸೂಚಿ ವಿಫಲವಾಗಿವೆ ಎಂದು ನೇಚರ್ ಕನ್ಸರ್‌ವೇಶನ್ ಫೌಂಡೇಶನ್ ವಿಜ್ಞಾನಿ ಸಂಜಯ್ ಗುಬ್ಬಿ ತಂಡ ನಡೆಸಿದ ಅಧ್ಯಯನ ವರದಿ ತಿಳಿಸಿದೆ.
ವನ್ಯಪ್ರಾಣಿಗಳು ನಾಡಿಗೆ ಬಂದಾಗ ಜನ ಹೇಗೆ ವರ್ತಿಸುತ್ತಾರೆ ಎನ್ನುವುದೂ ಮುಖ್ಯ. ಪರಿಸ್ಥಿತಿ ಎದುರಿಸಲು ಜನರಲ್ಲಿ ಅರಿವು ಮೂಡಿಸಬೇಕಿದೆ. ಅರಣ್ಯದಂಚಿನ ಜನರು ಸಾಕುಪ್ರಾಣಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಆಹಾರ ತ್ಯಾಜ್ಯಗಳನ್ನು ಅರಣ್ಯ ಪ್ರದೇಶಗಳಲ್ಲಿ ಬಿಸಾಡುವುದಕ್ಕೆ ತಡೆವೊಡ್ಡಬೇಕು. ನೈಸರ್ಗಿಕ ಅರಣ್ಯ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಳ್ಳುವುದು ಸಹಜ. ಆದರೆ ವದಂತಿ ಹಾಗೂ ಊಹಾಪೋಹಗಳನ್ನು ಆಧರಿಸಿ ಜನ ಕರೆ ಮಾಡಿ, ಬೋನು ಅಳವಡಿಸಲು ಒತ್ತಡ ಹೇರುತ್ತಿರುವುದರಿಂದ ಇಲಾಖೆಯ ಶ್ರಮ, ಸಮಯ ವ್ಯರ್ಥಗೊಳ್ಳುತ್ತಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ಚಿರತೆಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಸಿಸಿ ಕ್ಯಾಮರಾ, ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳು ಚಿರತೆ ಇರುವಿಕೆಯನ್ನು ಹೆಚ್ಚು ಪ್ರಚಾರಕ್ಕೆ ತರುತ್ತಿವೆ. ಚಿರತೆ ಕಾಣಿಸಿಕೊಂಡಾಕ್ಷಣ ಅದನ್ನು ಸಂಘರ್ಷ ಎನ್ನಲಾಗದು. ಜನವಸತಿ ಪ್ರದೇಶದಲ್ಲಿ ಚಿರತೆ ಕಂಡು ಬಂದಾಗ ಜನ ಗುಂಪು ಸೇರದೆ ಸುರಕ್ಷಿತ ಸ್ಥಳಾಂತರಕ್ಕೆ ಸಹಕರಿಸಬೇಕಿದೆ.
ಸಂಜಯ್ ಗುಬ್ಬಿ, ವಿಜ್ಞಾನಿ, ನೇಚರ್ ಕನ್ಸರ್‌ವೇಶನ್ ಫೌಂಡೇಶನ್
ವನ್ಯಪ್ರಾಣಿ ಸಂರಕ್ಷಣೆಯಲ್ಲಿ ಇಲಾಖೆ ಉತ್ತಮವಾಗಿ ತೊಡಗಿಸಿಕೊಳ್ಳುತ್ತಿದೆ. ಸಹಜವಾಗಿ ಚಿರತೆ ಸಂತತಿ ಹೆಚ್ಚಳವಾಗುತ್ತಿದೆ. ಪಶ್ಚಿಮಘಟ್ಟ ಸರಣಿಯಲ್ಲಿ ಮೂಕಾಂಬಿಕಾ, ಸೋಮೇಶ್ವರ, ಕುದುರೆಮುಖ ರಕ್ಷಿತಾರಣ್ಯಗಳು ಪರಸ್ಪರ ಬೆಸೆದುಕೊಂಡಿದ್ದು, ವನ್ಯಪ್ರಾಣಿಗಳು ನಿರ್ದಿಷ್ಟ ಪ್ರದೇಶವನ್ನು ಹಂಚಿಕೊಂಡು ಅಸ್ತಿತ್ವ ಸ್ಥಾಪಿಸಿರುತ್ತದೆ. ಸಂಖ್ಯೆ ಹೆಚ್ಚಳವಾದಾಗ ಪೈಪೋಟಿ ಸೃಷ್ಟಿಯಾಗಿ ಕೆಲವೊಂದು ಅರಣ್ಯದಂಚಿನಲ್ಲಿ ನೆಲೆ ಕಂಡುಕೊಳ್ಳುತ್ತವೆ. ಇವು ಜನವಸತಿ ಪ್ರದೇಶದತ್ತ ಲಗ್ಗೆ ಇಡುತ್ತಿವೆ.
ಆಶೀಶ್ ರೆಡ್ಡಿ, ಡಿಎಫ್‌ಒ, ಕುಂದಾಪುರ ವಿಭಾಗ