

ರೋಣ: ಕರೊನಾ ಎರಡನೇ ಅಲೆ ರೋಣದಲ್ಲಿ ಅಬ್ಬರಿಸುತ್ತಿದೆ. ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಪಟ್ಟಣದ ಅಟಲ್ ಬಿಹಾರಿ ವಾಜಪೇಯಿ ಮಾದರಿ ವಸತಿ ಶಾಲೆಯಲ್ಲಿ ಶನಿವಾರ ಐವರಲ್ಲಿ ಕಾಣಿಸಿದ್ದ ಸೋಂಕು, ಭಾನುವಾರ ಬರೋಬ್ಬರಿ 14 ಜನರಿಗೆ ತಗುಲಿದ್ದು, ಸೋಂಕಿತರ ಸಂಖ್ಯೆ 19 ಕ್ಕೇರಿದೆ.
ಪಿಯುಸಿ ಪ್ರಥಮ ವರ್ಷದ ವಿಜ್ಞಾನ ವಿಭಾಗದ ಒಬ್ಬ ವಿದ್ಯಾರ್ಥಿ, ಇಬ್ಬರು ವಿದ್ಯಾರ್ಥಿನಿಯರು, 8ರಿಂದ 10ನೇ ತರಗತಿಯ ಐವರು ವಿದ್ಯಾರ್ಥಿಗಳು, ಐವರು ವಿದ್ಯಾರ್ಥಿನಿಯರು ಹಾಗೂ ಒಬ್ಬ ಅಡುಗೆ ಸಿಬ್ಬಂದಿಗೆ ಕೋವಿಡ್ ತಗುಲಿರುವುದು ಭಾನುವಾರ ದೃಢಪಟ್ಟಿದೆ. ಶಾಲೆಯಲ್ಲಿ ಕುಡಿಯಲು, ಬಳಸಲು ಟ್ಯಾಂಕರ್ ಮೂಲಕ ನೀರು ಪೂರೈಕೆಯಾಗುತ್ತಿತ್ತು. ಆದರೀಗ ಶಾಲೆ ವಿದ್ಯಾರ್ಥಿಗಳಿಗೆ ಕರೊನಾ ತಗುಲಿದ ಸುದ್ದಿ ತಿಳಿಯುತ್ತಿದ್ದಂತೆ ಟ್ಯಾಂಕರ್ನವರು ನೀರು ಪೂರೈಸುತ್ತಿಲ್ಲ. ಇದರಿಂದಾಗಿ ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಹನಿ ನೀರಿಲ್ಲದೆ ಪರದಾಡುವಂತಾಗಿದೆ.
ಪಾಲಕರಿಂದ ತರಾಟೆ: ಶಾಲೆಯಲ್ಲಿ ಕರೊನಾ ಹರಡುತ್ತಿದ್ದರೂ ಮಕ್ಕಳನ್ನು ಪರಸ್ಪರ ಅಂತರವಿಲ್ಲದೆ ಒಬ್ಬರ ಹತ್ತಿರ ಮತ್ತೊಬ್ಬರನ್ನು ಕುಳ್ಳಿರಿಸಿರುವುದನ್ನು ಕಂಡ ಪಾಲಕರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋದರು.
ತಹಸೀಲ್ದಾರ್ ಮುಂದೆ ಕಣ್ಣೀರಿಟ್ಟ ಶಿಕ್ಷಕರು: ಇಲ್ಲಿ ಒಂದು ಹನಿ ನೀರಿಲ್ಲ. ಯಾವುದೇ ರೀತಿಯ ಅನುಕೂಲತೆಗಳಿಲ್ಲ. ಮಕ್ಕಳು ಹಾಗೂ ಸಿಬ್ಬಂದಿಗೆ ಮನೆಗಳಲ್ಲಿ ಕ್ವಾರಂಟೈನ್ ಆಗಲು ಅವಕಾಶ ನೀಡಿ. ಅವರು ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಾರೆ ಎಂದು ಶಾಲೆ ಶಿಕ್ಷಕರು ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಮುಂದೆ ಕಣ್ಣೀರಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್, ಈ ಬಗ್ಗೆ ಆರೋಗ್ಯ ಇಲಾಖೆಯವರನ್ನು ವಿಚಾರಿಸಬೇಕೆಂದು ಹೇಳಿದರು.
ಅಧಿಕಾರಿಗಳ ಸಮನ್ವಯ ಕೊರತೆ: ಶಾಲೆಯಲ್ಲಿ ಉಲ್ಬಣಿಸುತ್ತಿರುವ ಕರೊನಾ ಸೋಂಕು ನಿಯಂತ್ರಣಕ್ಕೆ ಯಾರೊಬ್ಬರೂ ಮುತುವರ್ಜಿ ವಹಿಸುತ್ತಿಲ್ಲ. ಈ ಶಾಲೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುತ್ತಿದೆ. ಇಲ್ಲಿಯವರೆಗೂ ತಾಲೂಕು, ಜಿಲ್ಲಾ ಮಟ್ಟದ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸೌಜನ್ಯಕ್ಕಾದರೂ ಇಲ್ಲಿಗೆ ಭೇಟಿ ನೀಡಿಲ್ಲ. ಇನ್ನು ತಹಸೀಲ್ದಾರ್, ತಾಲೂಕು ಆರೋಗ್ಯಾಧಿಕಾರಿಗಳು ಕಾಟಾಚಾರಕ್ಕೆಂಬಂತೆ ಭಾನುವಾರ ಬೆಳಗ್ಗೆ 11ಕ್ಕೆ ಬಂದು ಹೋಗಿದ್ದಾರೆ ವಿನಃ ಗಂಭಿರವಾಗಿ ಕ್ರಮ ಕೈಗೊಳ್ಳುತ್ತಿಲ್ಲ.
ಕ್ರಮ ಕೈಗೊಳ್ಳದಿದ್ದರೆ ಸೋಂಕು ಹೆಚ್ಚಳ: ಈ ವಸತಿ ಶಾಲೆ ಕೊಠಡಿಗಳು ಚಿಕ್ಕದಾಗಿವೆ. ಒಳಗೆ ಫ್ಯಾನ್ಗಳಿಲ್ಲ. ಸಿಕ್ಕಾಪಟ್ಟೆ ಸೆಕೆಯಾಗುತ್ತದೆ. ಅದರಲ್ಲಿ ವಿದ್ಯಾರ್ಥಿಗಳನ್ನು ತುಂಬಿದ್ದಾರೆ. ಬಹುತೇಕ ಮಕ್ಕಳು ಜ್ವರ, ಕೆಮ್ಮಿನಿಂದ ಬಳಲುತ್ತಿದ್ದಾರೆ. ಇದರಲ್ಲಿ ಕರೊನಾ ಶಂಕಿತ ಮಕ್ಕಳು ಇದ್ದಾರೆ. ಹೀಗೆ ಬಿಟ್ಟರೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತದೆ ಎಂದು ರೋಣ ಸರ್ಕಾರಿ ಆಸ್ಪತ್ರೆಯ ವೈದ್ಯೆ ಡಾ. ಮಲ್ಲಮ್ಮ ಹೊಸಮನಿ ಅವರು ತಹಸಿಲ್ದಾರ್ ಜೆ.ಬಿ. ಜಕ್ಕನಗೌಡ್ರಗೆ ಹೇಳಿದರು.
ಬೇಜವಾಬ್ದಾರಿ ಉತ್ತರ: ಈ ಕುರಿತು ಮಾಹಿತಿಗಾಗಿ ಜಿಲ್ಲಾ ಆರೋಗ್ಯಾಧಿಕಾರಿ ಸತೀಶ ಬಸರಿಗಿಡದ ಅವರನ್ನು ಸಂರ್ಪಸಿದರೆ, ‘ಏನ್ ಬಹಳ ಇಲ್ಲ. ಕರೊನಾ ಸೋಂಕಿತರ ಸಂಖ್ಯೆ ಈಗ 19ಕ್ಕೇರಿದೆ. ಈ ಬಗ್ಗೆ ತಾಲೂಕು ವೈದ್ಯಾಧಿಕಾರಿ ಜತೆಗೆ ಮಾತನಾಡಿದ್ದೇನೆ. ನೀವೇನು ಕಾಳಜಿ ಮಾಡಬೇಡಿ’ ಎಂದು ಬೇಜವಾಬ್ದಾರಿಯಿಂದ ಹೇಳಿದರು.
ವಸತಿ ಶಾಲೆಯಲ್ಲಿ ಮಕ್ಕಳಿಗೆ ಆಹಾರ ತಯಾರಿಸಿ ಕೊಡಬೇಡಿ ಎಂದು ಆರೋಗ್ಯ ಇಲಾಖೆಯವರು ಹೇಳಿದ್ದಾರೆ. ಇನ್ನು ಹೊರಗಿಂದ 200 ಮಕ್ಕಳಿಗೆ ಆಹಾರ ತಂದು ಕೊಡುವುದು ನಮ್ಮಿಂದ ಅಸಾಧ್ಯ. ಈ ಬಗ್ಗೆ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳಿಗೆ ಹೇಳಿದರೆ ಇಲ್ಲಿಯವರೆಗೂ ಯಾವುದೇ ರೀತಿಯ ಸ್ಪಂದನೆಯಿಲ್ಲ. ದಿನದಿಂದ ದಿನಕ್ಕೆ ಶಾಲೆಯಲ್ಲಿ ಕರೊನಾ ಸೊಂಕು ಉಲ್ಬಣಗೊಳ್ಳುತ್ತಿದೆ. ಮಕ್ಕಳ ಪಾಲಕರು ನಮ್ಮೊಂದಿಗೆ ಜಗಳವಾಡಿ ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ.| ಎಸ್.ಬಿ. ಕಪ್ಪರದಮಠ, ಪ್ರಭಾರಿ ಪ್ರಾಚಾರ್ಯ