ನೂಲ್ವಿಯಲ್ಲಿ ಸೂಪರ್ ಮಾರ್ಕೆಟ್ ಆರಂಭ,  ಕೃಷಿ ಪತ್ತಿನ ಸಹಕಾರ ಸಂಘದಿಂದ ವಿನೂತನ ಯೋಜನೆ

IMG_20250216_210140_468.jpg
Published on

ಹುಬ್ಬಳ್ಳಿ: ತಾಲೂಕಿನ ನೂಲ್ವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಆಧುನಿಕ ಸೌಲಭ್ಯಗಳನ್ನು ಗ್ರಾಮಕ್ಕೆ ತರುವಲ್ಲಿ ಮುಂಚೂಣಿಯಲ್ಲಿದ್ದು, ಸುತ್ತಮುತ್ತಲಿನ ರೈತರು, ಗ್ರಾಹಕರ ಮೆಚ್ಚುಗೆ ಗಳಿಸಿದೆ.

ಗ್ರಾಮದಲ್ಲಿ ನೂತನವಾಗಿ ಸೂಪರ್ ಮಾರ್ಕೆಟ್, ಗೋದಾಮು, ವಾಣಿಜ್ಯ ಮಳಿಗೆಗಳನ್ನು ಆರಂಭಿಸಿ ನಗರದ ಸವಲತ್ತುಗಳನ್ನು ಗ್ರಾಮೀಣ ಜನರ ಮನೆ ಬಾಗಿಲಿಗೆ ತಂದಿದೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕೃಷಿ ಪತ್ತಿನ ಸಹಕಾರ ಸಂಘದಿಂದ ಆರಂಭಿಸಿದ ಸೂಪರ್ ಬಜಾರ್ ಹಾಗೂ ಇ ಪ್ಯಾಕ್ಸ್ ಸೌಲಭ್ಯ ಉದ್ಘಾಟಿಸಿದರು. ಸಹಕಾರ ಸಂಘವು ಗ್ರಾಮದಲ್ಲಿ ಎಲ್ಲರೂ ಮೆಚ್ಚುವಂತಹ ಕೆಲಸ ಮಾಡುತ್ತಿದೆ. ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಗ್ರಾಮದಲ್ಲಿ ಸಹಕಾರ ಸಂಘವು ಕೃಷಿಗೆ ಸಂಬಂಧಪಟ್ಟ ಔಷಧ, ಗೊಬ್ಬರ ಹಲವಾರು ಸೌಲಭ್ಯಗಳನ್ನು ಪ್ರಾಮಾಣಿಕತೆಯಿಂದ ದೊರಕಿಸಿ ಕೊಡುತ್ತಿದೆ. ಹಲವು ಪ್ರಶಸ್ತಿಗಳಿಗೆ ಭಾಜನವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಪಿ.ಸಿ. ಸಿದ್ದನಗೌಡ್ರ, ಈ ಭಾಗದ ಜನರಿಗೆ ಒಂದೇ ಸೂರಿನ ಅಡಿಯಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸಿ ಕೊಡುವಲ್ಲಿ ನೂಲ್ವಿ ಸಹಕಾರ ಸಂಘ ಮುಂಚೂಣಿಯಲ್ಲಿದೆ. ಇದಕ್ಕೆ ನೌಕರರ ಸೇವಾ ಮನೋಭಾವ ಮತ್ತು ಆಡಳಿತ ಮಂಡಳಿಯ ಸಹಕಾರ ಕಾರಣವಾಗಿದೆ. ಇದರ ಸದುಪಯೋಗವನ್ನು ಸುತ್ತಮುತ್ತಲಿನ ಗ್ರಾಮದ ಜನರು ಪಡೆದುಕೊಳ್ಳಬೇಕು ಎಂದರು.

ಸಂಘದ ಗಣಕೀಕೃತ ಇ ಪ್ಯಾಕ್ಸ್ ಉದ್ಘಾಟನೆ ಮಾಡಿದ ಕುಂದಗೋಳ ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದಿರುವುದು ಬಹಳ ಸಂತೋಷದ ವಿಷಯ. ಈಗ ಅಂತರ್ಜಾಲದ ಸಕಲ ಸೇವೆ ನೀಡಲು ಸನ್ನದ್ಧವಾಗಿರುವ ಮೊದಲ ಸಹಕಾರ ಸಂಘವಾಗಿದೆ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಮುತ್ತನಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮದಲ್ಲಿ ಮೊದಲು ರಸಗೊಬ್ಬರ, ಕ್ರಿಮಿನಾಶಕಗಳನ್ನು ಸಂದಿಂದ ಪೂರೈಕೆ ಮಾಡಲಾಗುತ್ತಿತ್ತು. ದಿನಸಿ ಅಗತ್ಯ ವಸ್ತುಗಳಿಗೆ ಸಿಟಿಗೆ ಹೋಗಬೇಕಾಗಿತ್ತು. ಇದೀಗ ಗ್ರಾಮದಲ್ಲಿ ಸೂಪರ್ ಬಜಾರ್ ಅನ್ನು ತೆರೆದಿದ್ದು, ಸುತ್ತಮುತ್ತಲಿನ ಗ್ರಾಮದವರಿಗೂ ಅನುಕೂಲವಾಗಿದೆ ಎಂದರು.

ಕುಂದಗೋಳ ಕಲ್ಯಾಣಪುರಮಠದ ತ್ರಿವಿಧ ದಾಸೋಹಿ ಶ್ರೀಬಸವಣ್ಣಜ್ಜ ಅವರು ಸಾನ್ನಿಧ್ಯ ವಹಿಸಿದ್ದರು. ವೇದಮೂರ್ತಿ ಎಸ್.ಆರ್. ಹಿರೇಮಠ ಇದ್ದರು. ಸಹಕಾರ ರತ್ನ ಪುರಸ್ಕೃತ ಶಂಕರಗೌಡ ಸಿದ್ದನಗೌಡ್ರ ಗೌರವಾಧ್ಯಕ್ಷತೆ ವಹಿಸಿದ್ದರು.

ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ನಿಂಗನಗೌಡ ಮರಿಗೌಡ್ರು, ನಬಾರ್ಡ್ ಎಜಿಎಂ ಮಯೂರ್ ಕಾಂಬ್ಳೆ, ರಮೇಶ ಗಣಪತಿ, ಗ್ರಾಪಂ ಅಧ್ಯಕ್ಷೆ ಪುಷ್ಪಾವತಿ ಮುಖಾಸಿ, ಮಲ್ಲಿಕಾರ್ಜುನ ಹೊರಕೇರಿ, ಉಮೇಶ ಹೆಬಸೂರ, ಜಗನ್ನಾಥಗೌಡ ಸಿದ್ದನಗೌಡ, ಗದಿಗೆಪ್ಪ ಜಿಡ್ಡಿ ಹಾಗೂ ನಿರ್ದೇಶಕರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net