ಸನ್ಮಾರ್ಗ ತೋರಿದ ಶಿವಶರಣ ನುಲಿಯ ಚಂದಯ್ಯ

Photos (1)
Published on

ಧಾರವಾಡ: ಕಾಯಕ ನಿಷ್ಠೆ, ದಾಸೋಹ ಹಾಗೂ ಪ್ರಾಮಾಣಿಕತೆಗೆ ಹೆಸರಾದ ಶಿವಶರಣ ಶ್ರೀ ನುಲಿಯ ಚಂದಯ್ಯನವರು ಸಮಾಜಕ್ಕೆ ಸನ್ಮಾರ್ಗ ತೋರಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.
ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಸಭಾಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಶಿವಶರಣ ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚಂದಯ್ಯನವರು ಬಸವಣ್ಣನವರ ವಿಚಾರಧಾರೆಯಿಂದ ಪ್ರಭಾವಿತರಾಗಿ ಶಿವಾನುಭವ ಮಂಟಪಕ್ಕೆ ಸೇರಿದ್ದರು. 12ನೇ ಶತಮಾನದ ಸಕಲ ಶರಣರ ಪ್ರೀತಿಗೆ ಪಾತ್ರರಾಗಿದ್ದರು. ಹುಲ್ಲಿನ ಹಗ್ಗ ಹೊಸೆಯುವ ಕಾಯಕ ಮಾಡಿ ಅದರ ಮಾರಾಟದಿಂದ ಬಂದ ಆದಾಯವನ್ನು ದಾಸೋಹ ಸೇವೆಗೆ ದಾನ ಮಾಡುತ್ತಿದ್ದರು. ಸಮಾಜದ ಅಂಕುಡೊಂಕು ತಿದ್ದುವಲ್ಲಿ ಅವರ ಪಾತ್ರ ದೊಡ್ಡದು ಎಂದರು.
ಹುಬ್ಬಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವೈ.ಎಂ. ಭಜಂತ್ರಿ ಶ್ರೀ ನುಲಿಯ ಚಂದಯ್ಯನವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಉಪ್ಪಿನಬೆಟಗೇರಿಯ ಮೂರುಸಾವಿರವಿರಕ್ತ ಮಠದ ಶ್ರೀ ಗುರುಕುಮಾರ ವಿರೂಪಾಕ್ಷೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕೊರಮ ಸಂಘದ ಅಧ್ಯಕ್ಷ ನಾರಾಯಣ ಭಜಂತ್ರಿ, ಕೊರವ ಮಹಿಳಾ ಸಂಘದ ಅಧ್ಯಕ್ಷೆ ಸುನಂದಾ ಭಜಂತ್ರಿ, ಮುಖಂಡರಾದ ಹನುಮಂತಪ್ಪ ಕೊರವರ, ಮಾರುತಿ ಮಾಕಡವಾಲೆ, ಮಂಜುನಾಥ ಭಜಂತ್ರಿ, ಇತರರಿದ್ದರು.
ಡಾ. ಉಮಾದೇವಿ ಭಜಂತ್ರಿ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಜಿಲ್ಲೆಯ ಕೊರಮ, ಕೊರಚ ಮತ್ತು ಕುಂಚಿ ಕೊರವರ ಸಮುದಾಯದ ಮಕ್ಕಳಿಗೆ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net