ಅಂಕುಡೊಂಕು ತಿದ್ದಿದ್ದ ನುಲಿಯ ಚಂದಯ್ಯ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಬಣ್ಣನೆ

Nuliya Chandaiya Jayanthi Mandya
Published on

ಮಂಡ್ಯ: ನುಲಿಯ ಚಂದಯ್ಯ ಕಾಯಕ ಯೋಗಿಯಾಗಿ ತಮ್ಮ ಉಪದೇಶದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಹೋರಾಟ ಮಾಡಿದರು. ಅವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.

ನಗರದ ಹಿಂದಿ ಭವನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಶರಣರ ಕ್ರಾಂತಿ ನಡೆಯುವ ಸಂದರ್ಭದಲ್ಲಿ ಜ್ಞಾನ ಮತ್ತು ದಾಸೋಹಕ್ಕೆ ಹೆಚ್ಚು ಮಹತ್ವವನ್ನು ನುಲಿಯ ಚಂದಯ್ಯ ಅವರು ನೀಡಿದರು. ಅವರು ಒಬ್ಬ ಶ್ರೇಷ್ಟ ಶರಣರಾಗಿದ್ದವರು. ಶರಣರ ಸಂಘದಲ್ಲಿ ವಿಶೇಷ ವ್ಯಕ್ತಿತ್ವವನ್ನು ಹೊಂದಿ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡಿದ್ದಾರೆ ಎಂದರು.

ನುಲಿಯ ಚಂದಯ್ಯ ಅವರು ಭಕ್ತಿಯ ಜತೆಗೆ ಜ್ಞಾನ, ಶ್ರದ್ದೆ, ಕಾಯಕಕ್ಕೆ ಹೆಚ್ಚು ಆದ್ಯತೆ ನೀಡಿದವರು. ಶ್ರದ್ದೆ ಮತ್ತು ಕಾಯಕದಿಂದ ಸಮಾಜವನ್ನು ನಡೆಸುವ ಸಂದೇಶವನ್ನು ನೀಡಿದ್ದಾರೆ. ಅಂದಿನ ಕಾಲದಲ್ಲಿ ಎಲ್ಲ ವರ್ಗ, ಸಮುದಾಯದವರಿಗೂ ದಾಸೋಹವನ್ನು ನೀಡುತ್ತಿದ್ದರು. ಕಾಯಕ ನಿಷ್ಠೆಯ ಕೊರತೆಯಿಂದ ಸಮುದಾಯಗಳ ಅಭಿವೃದ್ಧಿ ಕುಂಠಿತವಾಗಿವೆ. ಸಮುದಾಯಗಳು ಸಂವಿಧಾನ ಮತ್ತು ಸ್ವಾತಂತ್ರ್ಯವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಒಳ್ಳೆಯ ಶಿಕ್ಷಣ ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದು ಮುಂದೆ ಬರಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಜ್ಞಾನದಿಂದ ಮಾತ್ರ ವ್ಯಕ್ತಿಯ ಘನತೆ ಸಾಧ್ಯ. ಮೇಲ್ವರ್ಗದ ಸಮಾಜ ತಳ ಸಮುದಾಯದವರನ್ನು ಸಮಾನವಾಗಿ ಸ್ವೀಕರಿಸಿ ಗೌರವಿಸಬೇಕು. ಯಾವುದೇ ಸಮುದಾಯದ ವ್ಯಕ್ತಿಯು ಘನತೆಯಿಂದ ಜೀವಿಸಬೇಕು. ಜ್ಞಾನದಿಂದ ಮಾತ್ರ ವ್ಯಕ್ತಿಯ ಘನತೆ ಹೆಚ್ಚಲು ಸಾಧ್ಯ. ಭಾರತ ಸಂವಿಧಾನ ವ್ಯಕ್ತಿಯ ಘನತೆ ಹಾಗೂ ದೇಶದ ಏಕತೆಗೆ ಆದ್ಯತೆಯನ್ನು ನೀಡಿದೆ. ಜತೆಗೆ ಎಲ್ಲರಿಗೂ ಸಮಾನ ಅವಕಾಶವನ್ನು ನೀಡಿದೆ. ಪ್ರತಿ ಸಮುದಾಯಕ್ಕೂ ಶಿಕ್ಷಣ, ಜ್ಞಾನ, ಜಾಗೃತಿ ಅತ್ಯಂತ ಮುಖ್ಯವಾಗಿದೆ. ಈ ಅಂಶಗಳನ್ನು ಯಾವ ಸಮುದಾಯ ಒಳಗೊಂಡಿರುತ್ತದೋ ಆ ಸಮುದಾಯಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತವೆ. ಶಿಕ್ಷಣದಿಂದ ಸುಂದರ ಬದುಕನ್ನು ನಡೆಸಬಹುದು ಎಂದರು.

ನಗರಸಭೆಯ ಅಧ್ಯಕ್ಷ ಎಂ.ವಿ.ಪ್ರಕಾಶ್ ಮಾತನಾಡಿ, ಎಲ್ಲ ಸಮುದಾಯಗಳು ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ. ಮಂಡ್ಯ ನಗರಸಭೆ ವತಿಯಿಂದ ದೊರಕುವ ಸೌಲಭ್ಯ ಸವಲತ್ತುಗಳನ್ನು ನೀಡಲು ಶ್ರಮಿಸುತ್ತೇವೆ. ಜನರ ಬೇಡಿಕೆಗಳಿಗೂ ಸ್ಪಂದಿಸುತ್ತೇವೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ.ಸಿದ್ದಲಿಂಗೇಶ್ ಮಾತನಾಡಿ, ನುಲಿಯ ಚಂದಯ್ಯ ಅವರು ಹಗ್ಗ ನೇಯುವ ಕಾಯಕ ಮಾಡಿ ಅದರಿಂದ ಬಂದ ಹಣವನ್ನು ಪ್ರಸಾದವಾಗಿ ಹಂಚುತ್ತಿದ್ದರು. ಇವರು ದಾಸೋಹವನ್ನು ನೀಡುತ್ತಿರುವುದರಿಂದ ಇವರಿಗೆ ದಾಸೋಹ ಜ್ಞಾನಿ ಎಂಬ ಬಿರುದು ಇದೆ. ಕಾಯಕವಿಲ್ಲದ ಜ್ಞಾನ, ಜ್ಞಾನವಿಲ್ಲದ ಕಾಯಕ ನಿರುಪಯುಕ್ತ ಎಂಬಂತೆ ಪ್ರತಿಯೊಬ್ಬರ ಜೀವನದಲ್ಲಿ ಕಾಯಕ ಹಾಗೂ ಜ್ಞಾನ ಇವೆರಡು ಮುಖ್ಯವಾಗಿದೆ ಎಂದರು.

ನಗರಸಭೆ ಉಪಾಧ್ಯಕ್ಷ ಅರುಣ್‌ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಜಿಲ್ಲಾ ಎಸ್‌ಸಿ/ಎಸ್‌ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ್ ಅಂಬೇಡ್ಕರ್ ಇತರರಿದ್ದರು. ಇದೇ ವೇಳೆ ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್ಸಿ ಮತ್ತು ದ್ವೀತಿಯ ಪಿಯುಸಿ ಹಾಗೂ ಪದವಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net